ಗದಗ: ಹಳ್ಳದ ನೀರಿನಲ್ಲಿ ಇಬ್ಬರು ಬೈಕ್ ಸವಾರರು ಕೊಚ್ಚಿ ಹೋದ ಘಟನೆ ರವಿವಾರ (ಸೆ.29) ರಾತ್ರಿ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಬಳಿ ನಡೆದಿದೆ. ಕೊಚ್ಚಿಹೋದ ಯುವಕರಲ್ಲಿ ಓರ್ವ ಶವವಾಗಿ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದೆ.
25 ವರ್ಷದ ಶಿವಪ್ಪ ಅವರಾದಿ ಎಂಬ ಯುವಕನ ಶವ ಪತ್ತೆಯಾಗಿದೆ. ಇನ್ನು 26 ವರ್ಷದ ಮಣಿಕಂಠ ಮಲ್ಲಾಪೂರ ಎಂಬ ಯುವಕನಿಗೆ ಶೋಧ ಕಾರ್ಯ ಮುಂದುವರೆದಿದೆ.
ಘಟನೆಯ ವಿವರ: ರವಿವಾರ ಸಾಯಂಕಾಲದಿಂದ ನರಗುಂದ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಮಣಿಕಂಠನ ಹೆಂಡತಿ ನರಗುಂದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನಿರಂತರ ಮಳೆಯಾದ್ದರಿಂದ ಮಣಿಕಂಠನ ಹೆಂಡತಿಗೆ ಹುಣಸಿಕಟ್ಟಿ ಗ್ರಾಮಕ್ಕೆ ಬರಲಾಗಿಲ್ಲ. ಆಗ ರಾತ್ರಿ 9 ಗಂಟೆ ಸುಮಾರಿಗೆ ಮಣಿಕಂಠ ತನ್ನ ಹೆಂಡತಿಯನ್ನು ಕರೆತರಲು ಗೆಳೆಯ ಶಿವಪ್ಪನನ್ನು ಕರೆದುಕೊಂಡು ಹುಣಸಿಕಟ್ಟಿ ಗ್ರಾಮದಿಂದ ನರಗುಂದಕ್ಕೆ ಹೋಗಿದ್ದ. ನರಗುಂದ ಹಾಗೂ ಹುಣಸಿಕಟ್ಟಿ ನಡುವೆ ಒಡ್ಡಿನ ಹಳ್ಳ ರಭಸವಾಗಿ ಹರಿಯುತ್ತಿದ್ದು, ಅದನ್ನು ಲೆಕ್ಕಿಸದೆ ಹಳ್ಳದಾಟಲು ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಇಬ್ಬರು ಯುವಕರು ಕೊಚ್ಚಿಹೋಗಿದ್ದರು.
ಅದರಲ್ಲಿ ಶಿವಪ್ಪ ಅವರಾದಿ ಮೃತದೇಹ ಮುಳ್ಳಿನ ಕಂಟಿಯಲ್ಲಿ ಸಿಲುಕಿಕೊಂಡಿದ್ದು ಹೊರ ತೆಗೆಯಲಾಗಿದೆ. ಮಣಿಕಂಠನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸ್ಥಳಕ್ಕೆ ನರಗುಂದ ಶಾಸಕ ಸಿ.ಸಿ ಪಾಟೀಲ ಹಾಗೂ ಅಧಿಕಾರಿಗಳು ಭೇಟಿ ನೀಡಿದರು. ಕುರಿತು ಗದಗ ಜಿಲ್ಲೆಯ ನರಗುಂದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.