ಮನೆ ರಾಜ್ಯ ಯುವಕರು `ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆಂದೋಲನ ಆರಂಭಿಸಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಯುವಕರು `ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆಂದೋಲನ ಆರಂಭಿಸಿ: ವಿಶ್ವೇಶ್ವರ ಹೆಗಡೆ ಕಾಗೇರಿ

0

ಕೋಲಾರ(Kolar): ಪ್ರತಿಯೊಬ್ಬ ಯುವಕರೂ ನನ್ನ ಮತ ಮಾರಾಟಕ್ಕಿಲ್ಲ ಆಂದೋಲನ ಆರಂಭಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರಿ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.

ಕೋಲಾರ ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಆಯೋಜಿಸಿದ್ದ ಚುನಾವಣಾ ಸುಧಾರಣಾ ಕ್ರಮಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರೂ ಆಗಬೇಕು. ಇಲ್ಲದಿದ್ದರೆ ನಿಮ್ಮ ಬದುಕು ಅಂಧಕಾರವಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಜನಾಂದೋಲನ ಪ್ರಾರಂಭವಾಗಬೇಕು. ನನ್ನ ಮತ ಮಾರಾಟಕ್ಕಿಲ್ಲ ಎಂಬ ಆಂದೋಲನ ಆರಂಭಿಸಿ. ನಾವು ಹಣ ಕೊಟ್ಟರೂ ಬೇಡ ಎನ್ನಬೇಕು. ಈ ವಿಷಯದಲ್ಲಿ ಎಲ್ಲಿಯತನಕ ಯುವಕರಲ್ಲಿ ಜಾಗೃತಿ ಬರುವುದಿಲ್ಲವೋ ಅಲ್ಲಿಯ ತನಕ ಸುಧಾರಣೆ ಅಸಾಧ್ಯ ಎಂದರು.

ಆದರ್ಶ, ಮೌಲ್ಯಗಳ ರಕ್ಷಣೆ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಲ್ಲ, ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ. ಈ ಕಾರ್ಯ ನಡೆಯದಿದ್ದರೆ ಮೌಲ್ಯಗಳು ಅಧಃಪತನದತ್ತ ಸಾಗುತ್ತವೆ ಎಂದು ಎಚ್ಚರಿಸಿದರು.

ಬ್ರಿಟಿಷರು ಬಿಟ್ಟು ಹೋದ ಕಾರ್ಯಾಂಗದ ಫೈಲ್’ನಲ್ಲಿ ಕೊಕ್ಕೆ ಹಾಕಿ ಕಳಿಸುತ್ತಾರೆ, ಅಲ್ಲಿ ಜಡತ್ವ ಇದೆ, ಅದೇ ರೀತಿ ಪತ್ರಿಕಾ ರಂಗ ಹೇಗಿದೆ, ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬರುತ್ತದೆ, ಏಕೆ ಅಲ್ಲಿಯೂ ಆದರ್ಶ ಪಾಲನೆಯಾಗುತ್ತಿಲ್ಲ ಎಂಬ ಆತ್ಮಾವಲೋಕನ ಅಗತ್ಯ ಎಂದರು.

ನಿಷ್ಪಕ್ಷಪಾತ ಚುನಾವಣೆ, ಪರಿಶುದ್ಧ, ನ್ಯಾಯಸಮ್ಮತವಾಗಿ ನಡೆಸಲು ಜನರು ಜಾಗೃತರಾಗಬೇಕು. ಇದಕ್ಕೆ ಚುನಾವಣಾ ಆಯೋಗ ಮುಂದಾಳತ್ವ ವಹಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಆದರೆ, ಸರಿಯಾದ ಮತದಾರರ ಪಟ್ಟಿ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಸತ್ತವರ ಹೆಸರಿಗೂ ವೋಟ್ ಇರುತ್ತದೆ. ಅದನ್ನು ತೆಗೆಯುವುದಿಲ್ಲ ಎಂದು ವಿಷಾದಿಸಿದರು.

ಭಾರತದ 75 ವರ್ಷಗಳ ಸಾಧನೆಗೆ ಕಾರಣ ಸಂವಿಧಾನ. ಇದರ ಅದ್ಭುತ ಕೊಡುಗೆಯಿಂದಲೇ ದೇಶ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದೆ, ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ರಾಷ್ಟ್ರಪತಿ ಆಗಲು, ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿ ಯಾಗಲು ಸಂವಿಧಾನವೇ ಕಾರಣವಲ್ಲವೇ? ಎಂದರು.

ಸಂವಿಧಾನವನ್ನು ಇನ್ಯಾರೋ ಬರೆದಿದ್ದರೆ ಅದು ಬರೀ ಅಕ್ಷರ ಜೋಡಣೆ ಆಗಿರುತ್ತಿತ್ತು. ಆದರೆ, ಅಂಬೇಡ್ಕರ್ ಜೀವನಾನುಭವದ ಮೇಲೆ ಬರೆದಿದ್ದಾರೆ. ಹೀಗಾಗಿ ಅದು ಶ್ರೇಷ್ಠವಾಗಿ ಉಳಿದಿದೆ, ಸಂವಿಧಾನ ಅಂಗೀಕರಿಸಿ 73 ವರ್ಷಗಳಾಗಿವೆ. ವ್ಯವಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದೇವೆ. 75 ವರ್ಷಗಳ ಸಾಧನೆ ಮೆಲುಕು ಹಾಕಿದರೆ ಹೆಮ್ಮೆ ಎನಿಸುತ್ತದೆ ಎಂದರು.

ಹಿಂದಿನ ಲೇಖನವುಶು ಕ್ರೀಡೆಯಲ್ಲಿ 3 ಚಿನ್ನ 2 ಕಂಚಿನ ಪದಕ ಗೆದ್ದ ಮೈಸೂರಿನ ಜಿ.ಪ್ರಣತಿ
ಮುಂದಿನ ಲೇಖನಪ್ರಶ್ನೆ ಪತ್ರಿಕೆಯೊಂದರ ಉತ್ತರ