ಮೈಸೂರು: ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ ವಿವಿಧ ವಿಷಯ ಕುರಿತು ಚರ್ಚಿಸಿದರು.
ಈ ವೇಳೆ ಜಲಜೀವನ್ ಮಿಷನ್ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಸಿಇಒ ಕೆ.ಎಂ.ಗಾಯಿತ್ರಿ ಅವರು, ಯೋಜನೆಯ ಅನುಷ್ಠಾನಕ್ಕೂ ಮುನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಜಲಸಮಿತಿ ರಚಿಸಿರುತ್ತಾರೆ. ಈ ಸಮಿತಿಯವರು ಜೆ.ಜೆ.ಎಂ ಕಾಮಗಾರಿಯು ಡಿಪಿಆರ್ ಪ್ರಕಾರ ಅನುಷ್ಠಾನವಾಗುತ್ತಿರುವುದನ್ನು ಪರಿಶೀಲಿಸಬೇಕು. ಜಲಸಮಿತಿ ಜೊತೆ ಸಮನ್ವಯ ಸಾಧಿಸಿ ಕಾಮಗಾರಿ ಉತ್ತಮವಾಗಿ ಕೈಗೊಂಡು ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಬೇಕು ಎಂದು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತವಾದ ಜಾಗ ಗುರುತಿಸಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಮಾಡಬೇಕು. ಗೃಹಬಳಕೆ ದ್ರವತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಬೂದು ನೀರು ನಿರ್ವಹಣಾ ಘಟಕ ನಿರ್ಮಿಸುವುದಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಿ. ಇದರಿಂದ ಜಲಸಂರಕ್ಷಣೆ ಜೊತೆಗೆ ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಕಾಪಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರತಿದಿನ ನಿಗದಿಪಡಿಸಿರುವ ಮಾನವದಿನಗಳ ಗುರಿ ಕಡ್ಡಾಯವಾಗಿ ಸಾಧಿಸಬೇಕು. ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸುಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಜಿಲ್ಲೆಗೆ ಬರ ಆವರಿಸಿರುವುದರಿಂದ ಉದ್ಯೋಗ ಕೇಳಿಕೊಂಡ ಬಂದ ಎಲ್ಲರಿಗೂ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಗ್ರಾಮದಲ್ಲೇ ಕೆಲಸ ದೊರೆತರೆ ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.
ತೆರಿಗೆ ವಸೂಲಾತಿಯನ್ನು ತಪ್ಪದೇ ಸಂಗ್ರಹಿಸಬೇಕು. ಗೂಗಲ್ ಪೇ, ಫೋನ್ ಪೇ ಮೂಲಕವೂ ತೆರಿಗೆ ಕಟ್ಟಬಹುದು ಎಂಬುದನ್ನು ಜನರಿಗೆ ತಿಳಿಸಿಕೊಡಬೇಕು ಎಂದು ಸೂಚಿಸಿದರು.
ಸಭೆಗೂ ಮುನ್ನ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ಗ್ರಂಥಾಲಯಕ್ಕೆ ಹೆಚ್ಚಿನ ಜನರನ್ನು ನೋಂದಣಿ ಮಾಡಿಸಬೇಕು. ಅಲ್ಲದೆ, ಉತ್ತಮ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಯತಕಾಲಿಕೆ ಮತ್ತು ಎಲ್ಲಾ ದಿನಪತ್ರಿಕೆಗಳನ್ನು ಗ್ರಂಥಾಲಯದಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಂಥಪಾಲಕರಿಗೆ ಸೂಚನೆ ನೀಡಿದರು.
ಡಿ.ಎಂ.ಜಿ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ಸಿಇಒ ಅವರು, ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ವತಿಯಿಂದ ನಡೆಸುವ ‘ಮಕ್ಕಳ ಗ್ರಾಮಸಭೆಯಲ್ಲಿ’ ಭಾಗವಹಿಸಿ ತಮ್ಮ ಸಮಸ್ಯೆಯನ್ನು ತಿಳಿಸಬೇಕು. ಅದ್ಯಾಗ್ಯೂ ಸಮಸ್ಯೆ ಪರಿಹರಿಸದಿದ್ದರೆ ನನಗೆ ನೇರವಾಗಿ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಶೆಟ್ಟನಾಯಕನಹಳ್ಳಿ ಗ್ರಾಮದಲ್ಲಿ ಸಿದ್ಧಪಡಿಸಿರುವ ‘ಕೂಸಿನ ಮನೆ’ಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನರೇಗಾ ಕೆಲಸಕ್ಕೆ ತೆರಳುವ ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳನ್ನು ಇಲ್ಲಿ ಪಾಲನೆ ಮಾಡಬೇಕು. ಇದರಿಂದ ಪೋಷಕರು ನಿಶ್ಚಿಂತೆಯಿಂದ ಕೆಲಸ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಗಿರಿಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಿತ್ರ, ಉಪಾಧ್ಯಕ್ಷರಾದ ಎಸ್.ಎಂ.ಪ್ರಭಾ, ಸದಸ್ಯರಾದ ಟಿ.ಕೃಷ್ಣಪ್ಪ, ಡಿ.ಬಿ.ಶಂಕರ್, ಭಗವಾನ್ ಸ್ವಾಮಿ, ಪಿಡಿಒ ಕೆ.ರುಕ್ಮಾಂಗದ, ಕಾರ್ಯದರ್ಶಿ ಎಸ್.ಸೌಮ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.