ಯುವ ಜನರ ಲೈಂಗಿಕ ಸಮಸ್ಯೆಗಳು ನಿಜವಾಗಿಯೂ ಸಮಸ್ಯೆಗಳೇ

0

ನನಗೆ ತಿಳಿದಂತೆ ಲೈಂಗಿಕ ಸಮಸ್ಯೆಗಳು ಅನ್ನುವುದಕ್ಕಿಂತ ಸೆಕ್ಸ್‌ ವಿಷಯ ಬಹುತೇಕ ಎಲ್ಲರ ಮನಸಿನಲ್ಲಿಯೂ ಒಂದಲ್ಲ ಒಂದು ಗೊಂದಲ ಎಬ್ಬಿಸುತ್ತದೆ. ಇಂತಹ ಗೊಂದಲಗಳು ಸಣ್ಣ ವಯಸ್ಸಿನಿಂದಲೇ ಕಾಣಿಸಿಕೊಳ್ಳುವುದು ಸಹಜ. ಹದಿಹರೆಯ ಕೊನೆಗೊಳ್ಳುವ ತನಕ ನಿತ್ಯವೂ ಕಾಡುವಂಥದ್ದು. ಹೆಣ್ಣು ಗಂಡುಗಳೆನ್ನುವ ಭೇದ ಈ ವಿಷಯಕ್ಕೆ ಅನ್ವಯಿಸುವುದಿಲ್ಲ. ತನ್ನ ಲಿಂಗಾಂಗಗಳ ಬಗ್ಗೆ ಕುತೂಹಲ, ತಪ್ಪು ಕಲ್ಪನೆಗಳು ಬಾಲ್ಯದ ದಿನಗಳಲ್ಲಿ ಅಪಾರ. ಲೈಂಗಿಕ ಆಸಕ್ತಿ ಕ್ರಿಯೆಗಳ ಬಗ್ಗೆ ಪಾಪ ಪ್ರಜ್ಞೆ, ಅಪರಾಧದ ಭಾವ, ಬಯಕೆ, ಭಯ, ಹೀಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಾಣಿಸಿಕೊಳ್ಳುವುದು.

ಲಿಂಗಾಂಗಗಳ ಉದ್ರೇಕ, ಮನಸಿನಲ್ಲಿ ಕಂಪನ ಮೂಡಿಸುವ ವಿಷಯ, ಆಲೋಚನೆ, ಚಿತ್ರ, ದೃಶ್ಯಗಳು ಮತ್ತಷ್ಟು ಆಸೆಯನ್ನೋ, ಆತಂಕವನ್ನೋ ಸೃಷ್ಟಿಸುವುದಂತೂ ನಿಜ. ಒಂದು ಕಡೆ ತನ್ನ ಶರೀರದ ಅಂಗಾಂಗಳು ಉದ್ರಿಕ್ತಗೊಳ್ಳುವುದರ ಅನುಭವ, ಇನ್ನೊಂದೆಡೆ ಮನಸಿನಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ತೃಪ್ತಿಗಾಗಿ ಕಾತುರ. ಇದರ ಜೊತೆಯಲ್ಲಿ ಸಮಾಜದ ಕಟ್ಟುಪಡುಗಳು, ಪಾಪ ಮಾಡುತ್ತಿರುವೆನೆಂಬ ಆತಂಕ ನಡೆನುಡಿಗಳ ಮೇಲೆ ಹಿಡಿತ ಸಾಧಿಸುತ್ತದೆ.

ಕೆಲವರಲ್ಲಂತೂ ಸುಖ ನಿದ್ದೆಯ ಹದ ಕೆಡಿಸುವಂತಹ ಕನಸು, ಕಲ್ಪನೆಗಳು. ಈ ಕಲ್ಪನೆಗಳಲ್ಲಿ ಯಾವಯಾವುದೋ ವ್ಯಕ್ತಿಗಳು ಲೈಂಗಿಕ ಬಯಕೆಯ ಪ್ರಬಲ ಪ್ರೇರಣೆಯಾಗಿ ಬಂದಿರುತ್ತಾರೆ. ಜಾಗೃತವಾಗಿರುವ ದಿನದ ಸಮಯದಲ್ಲಿ, ಅದರಲ್ಲಿಯೂ ಮುಖ್ಯ ಕೆಲಸಗಳನ್ನು ಮಾಡುತ್ತಿರುವಂತಹ ಸಮಯದಲ್ಲಿ ಈ ಕಲ್ಪನೆಗಳ ಬಗ್ಗೆ ಅಭಿಪ್ರಾಯಗಳು ಮೂಡಿಬರುತ್ತವೆ. ಅದೆಷ್ಟೋ ಆಪ್ತರು, ಸಂಬಂಧಿಗಳು ಲೈಂಗಿಕ ಮೂರ್ತಿಗಳಾಗಿ ದೇಹ, ಮನಸ್ಸಿಗೆ ತಾತ್ಕಾಲಿಕವಾಗಿ ಹಿತ ಒದಗಿಸಿರುತ್ತಾರೆ. ತೃಪ್ತಿ ಪಡೆದ ನಂತರ ಘೋರ ಅಪರಾಧ ಮಾಡಿದ ಭಾವನೆ. ಅದಕ್ಕೆ ಶಿಕ್ಷೆಯಾಗುತ್ತದೆಂಬ ಭಯ ಕೆಲವರಲ್ಲಿದ್ದರೆ, ಇನ್ನು ಕೆಲವರು ತಮಗೆ ತಾವೇ ಶಿಕ್ಷೆ ಕೊಡುತ್ತಾರೆ. ಇಂತಹ ಶಿಕ್ಷೆಗಳು ಶರೀರಕ್ಕಿಂತ ಮನಸಿಗೆ ನೋವು, ತಲ್ಲಣ ತರುವಂತಹದ್ದೇ ಆಗಿರುತ್ತದೆ.

ಪ್ರಚೋದಿಸುವ ಕ್ರಿಯೆ ಹಾಗೂ ಆತಂಕ

ಹೆಚ್ಚಿನ ಸಮಯದಲ್ಲಿ ಹಸ್ತಮೈಥುನ (ಮಾಸ್ಟರ್ಬೆಷನ್), ಜನನೇಂದ್ರಿಯಗಳನ್ನು ಭೌತಿಕ ಪ್ರಯತ್ನಗಳ ಮೂಲಕ ಉದ್ರೇಕಗೊಳಿಸುವುದು. ಲಿಂಗಾಂಗ ಸ್ನಾಯುಗಳ ಸೆಳೆತ, ಬಿಗಿತಗಳ ಮೂಲಕ ಸಿಗುವ ತೃಪ್ತಿ ಆಹ್ಲಾದಕರ ವಾಗಿರುವುದರಿಂದ ಅವುಗಳ ಪ್ರಚೋದನೆ ಸುಖ ನೀಡುತ್ತದೆ. ಆದರೆ ಹೀಗೆ ಪ್ರಚೋದಿಸುವ ಕ್ರಿಯೆಯು ಭಯ ಮತ್ತು ಆತಂಕಕ್ಕೂ ಕಾರಣವಾಗಿರುತ್ತದೆ. ಇತರರು, ಮನೆ ಮಂದಿ, ಸಮಾಜ ಇದನ್ನು ವಿರೋಧಿಸುತ್ತದೆ ಎನ್ನುವ ಕಲ್ಪನೆಗಳು ಈ ಮಾದರಿಯ ಭಯ, ಆತಂಕವನ್ನು ಮತ್ತಷ್ಟು ತೀವ್ರಗೊಳಿಸಿ ಬಿಡುತ್ತದೆ. ಇದಲ್ಲದೆಯೇ ಕೆಲವರಿಗೆ ಅತಿಯಾದ ಭಯದ ಭಾವನೆಯಿಂದ ಸಹಜ ಲೈಂಗಿಕ ಸ್ವಭಾವಗಳ ಬಗ್ಗೆಯೇ ನಕಾರಾತ್ಮಕ ಭಾವನೆಗಳು ಮೂಡಿಬಿಡುತ್ತವೆ. ಇದರ ಪರಿಣಾಮವಾಗಿ ಇತರರ ಲೈಂಗಿಕ ಕ್ರಿಯೆಗಳ ಮೇಲೂ ಹಿಡಿತ, ನಿರ್ಬಂಧ ಹೇರುವಂತಹ ಪ್ರಯತ್ನಗಳನ್ನು ಮಾಡುತ್ತಾರೆ.

ಶಾಲೆಯ ವಯಸ್ಸಿನಲ್ಲಿಯೇ ತಪ್ಪು ಕಲ್ಪನೆ

 ಶಾಲೆಯ ವಯಸ್ಸಿನಲ್ಲಂತೂ ಲೈಂಗಿಕ ವಿಷಯಗಳ ಬಗ್ಗೆ ವಿಪರೀತ ಎನ್ನುವಷ್ಟು ತಪ್ಪು ಅಭಿಪ್ರಾಯಗಳು ಇದ್ದೇ ಇರುವುದು. ಲೈಂಗಿಕ ಕ್ರಿಯೆಗಳನ್ನು ಕದ್ದು ಮುಚ್ಚಿ ನೋಡುವುದು, ಗೋಪ್ಯವಾಗಿ ಮಾಡುವುದು ಮತ್ತು ಅದರ ಬಗ್ಗೆಯೇ ಜಂಭ ಕೊಚ್ಚಿಕೊಳ್ಳುವುದು ಹದಿಹರೆಯದ ಹಂತದಲ್ಲಿ ಕಂಡು ಬರುವುದು ಅಪರೂಪವಲ್ಲ. ಇದೇ ಮಾದರಿಯಲ್ಲಿ ವಯಸ್ಕರಲ್ಲಿಯೂ ಲೈಂಗಿಕ ವಿಷಯಗಳ ಬಗ್ಗೆ ತಪ್ಪ ಕಲ್ಪನೆ, ಅಸಹ್ಯದ ಭಾವನೆಗಳು ಇರುತ್ತವೆ. ವಯಸ್ಸಿನ ಕಾರಣದಿಂದ ತಮ್ಮಲ್ಲಿರುವ ಲೈಂಗಿಕ ಪ್ರಜ್ಞೆ ಪರಿಪೂರ್ಣ ಎನ್ನುವಂತಹ ಭ್ರಮೆ. ಬಾಲ್ಯ ಮತ್ತು ಹದಿಹರೆಯದ ದಿನಗಳಲ್ಲಿ ಇದ್ದಂತಹ ಗೊಂದಲಗಳು ವಯಸ್ಕತನದಲ್ಲಿಯೂ ಮುಂದುವರೆಯುತ್ತವೆ ಅನೇಕ ವಯಸ್ಕರಲ್ಲಿ, ಸಮಾಜ ಸಹಿಸುವ ವಿಧಿ ವಿಧಾನಗಳ ಮೂಲಕವೇ ಲೈಂಗಿಕ ತೃಪ್ತಿ ಸಿಕ್ಕಿದ್ದರೂ ಇತರರ ಲೈಂಗಿಕ ಭಾವನೆ, ಆಸಕ್ತಿಗಳ ಬಗ್ಗೆ ಕ್ರೋಧ, ಸಹಿಸದಿರುವಿಕೆ ಮೂಲಕ ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ, ಬಹುಪಾಲು ನವವಿವಾಹಿತರು ತಮ್ಮ ವೈವಾಹಿಕ ಜೀವನದ ಆರಂಭದಲ್ಲಿ ಪೋಷಕರು, ಹಿರಿಯರಿಂದ ಇಂತಹ ನಡೆ ನುಡಿಗಳನ್ನು ಎದುರಿಸಿರುತ್ತಾರೆ. ನನಗೆ ತಿಳಿದ ಅದೆಷ್ಟೋ ನವ ವಿವಾಹಿತರ ಮಲಗುವ ಕೋಣೆಯ ಬಾಗಿಲ ಚಿಲಕ ತೆಗೆಸಿದ್ದ ಪೋಷಕರೂ ಇದ್ದಾರೆ. ಹಾಗೆಯೇ ನವ ದಂಪತಿಗಳಿಗೆ ಕೊಂಚವೂ ಏಕಾಂತ ಕೊಡದಂತಹ ಮನೆಯ ಹಿರಿಯರ ಬಗ್ಗೆ ಕೇಳಿದ್ದೇನೆ.