ಮನೆ ಸುದ್ದಿ ಜಾಲ 13 ಸಾವಿರ ಅನರ್ಹ ಗೃಹಲಕ್ಷ್ಮಿ ಫಲಾನುಭವಿಗಳು ಪತ್ತೆ , ₹60 ಲಕ್ಷ ಸರ್ಕಾರಕ್ಕೆ ಜಮೆ :...

13 ಸಾವಿರ ಅನರ್ಹ ಗೃಹಲಕ್ಷ್ಮಿ ಫಲಾನುಭವಿಗಳು ಪತ್ತೆ , ₹60 ಲಕ್ಷ ಸರ್ಕಾರಕ್ಕೆ ಜಮೆ : ಮೈಸೂರು

0

ಮೈಸೂರು: ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಯ ಮೊದಲ ಹಂತದಲ್ಲಿ 13 ಸಾವಿರ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ, ಪ್ರತಿಯೊಂದು ಕುಟುಂಬದ ಯಜಮಾನಿಗೆ 2,000 ರೂಪಾಯಿ ನೀಡುವುದಾಗಿ ವಾಗ್ದಾನ ಮಾಡಿತ್ತು. ಈ ಸಂಬಂಧ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಕಳೆದ ಮೂರು ವರ್ಷದ ಹಿಂದೆ ಮೈಸೂರು ಜಿಲ್ಲೆಯಲ್ಲಿ 6,99,666 ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.

ಹೀಗೆ ನೋಂದಣಿ ಮಾಡಿಸಿಕೊಂಡ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿಯನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಲಾಗುತ್ತಿತ್ತು. ಮೈಸೂರು ಜಿಲ್ಲೆಯ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸರ್ಕಾರ ಪ್ರತಿ ವರ್ಷ 134 ಕೋಟಿ ರೂಪಾಯಿ ನೀಡುತ್ತಿದೆ. ಅಂದರೆ ಕಳೆದ ಮೂರು ವರ್ಷದ ಅವಧಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ ಫಲಾನುಭವಿಗಳಿಗೆ ಸುಮಾರು 402 ಕೋಟಿ ರೂಪಾಯಿ ಪಾವತಿಸಿದೆ. ಈಗ ನಡೆಯುತ್ತಿರುವ ಫಲಾನುಭವಿಗಳ ಪರಿಷ್ಕರಣೆಯಲ್ಲಿ ಮೃತಪಟ್ಟಿರುವ, ಜಿ.ಎಸ್.ಟಿ. ಪಾವತಿ ಮಾಡುವ ಹಾಗೂ ನಕಲಿ ಫಲಾನುಭವಿಗಳಿರುವ ಬಗ್ಗೆ ಸರ್ಕಾರಕ್ಕೆ ಸುಳಿವು ದೊರೆತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ, ಅನರ್ಹ ಫಲಾನುಭವಿಗಳನ್ನು ಗುರುತಿಸುವಂತೆ ತಾಕೀತು ಮಾಡಿತ್ತು.

ಅದರಂತೆ ಮೈಸೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜು ನೇತೃತ್ವದ ಅಧಿಕಾರಿಗಳ ತಂಡ 6,99,99 ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಿದೆ. ಈ ಮೂಲಕ ಮೃತಪಟ್ಟಿರುವ 8 ಸಾವಿರ ಫಲಾನುಭವಿಗಳು, ಜಿ.ಎಸ್.ಟಿ. ಪಾವತಿ ಮಾಡುವ 5 ಸಾವಿರ ಫಲಾನುಭವಿಗಳನ್ನು ಗುರುತಿಸಲಾಯಿತು. ಅಲ್ಲದೆ ನಕಲಿ ಫಲಾನುಭವಿಗಳನ್ನೂ ಕೂಡ ಪತ್ತೆ ಹಚ್ಚಲಾಯಿತು. ಅನರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಲೋಪವಾಗಿ ಅರ್ಹರಿಗೆ ಅನ್ಯಾಯವಾಗಬಾರದೆಂದು ಮತ್ತೊಮ್ಮೆ ಪರಿಶೀಲನೆ ನಡೆಸಿತು. ಈ ಮೂಲಕ 13 ಸಾವಿರ ಅನರ್ಹ ಫಲಾನುಭವಿಗಳನ್ನು ಗುರುತಿಸಿರುವ ಇಲಾಖೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿತ್ತು. ಇದೀಗ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಯಲ್ಲಿ ಕಠಿಣ ನಿಯಮ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಪ್ರತಿಯೊಬ್ಬ ಫಲಾನುಭವಿ ಬಯೋಮೆಟ್ರಿಕ್ ಮಾಡಿಸುವುದು ಕಡ್ಡಾಯ. ಇದರಿಂದ ಮತ್ತಷ್ಟು ಅನರ್ಹ ಫಲಾನುಭವಿಗಳು ಯೋಜನೆಯಿಂದ ಹೊರಗುಳಿದು ಅರ್ಹರಿಗೆ ಯೋಜನೆ ಸದ್ವಿನಿಯೋಗ ಆಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ ಎನ್ನಲಾಗುತ್ತಿದೆ.