ಮನೆ ಅಪರಾಧ ನಕಲಿ ದಾಖಲೆ ಸೃಷ್ಠಿಸಿ ಮುಡಾ ನಿವೇಶನ ಅಡವಿಟ್ಟು 14 ಕೋಟಿ ರೂ. ಸಾಲ ಪಡೆದ ಭೂಗಳ್ಳರು:...

ನಕಲಿ ದಾಖಲೆ ಸೃಷ್ಠಿಸಿ ಮುಡಾ ನಿವೇಶನ ಅಡವಿಟ್ಟು 14 ಕೋಟಿ ರೂ. ಸಾಲ ಪಡೆದ ಭೂಗಳ್ಳರು: ದೂರು ದಾಖಲು

0

ಮೈಸೂರು(Mysuru):  ಮುಡಾಗೆ ಸೇರಿದ ಸುಮಾರು 25 ಕೋಟಿ ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್’ನಲ್ಲಿ ಅಡವಿಟ್ಟು 14 ಕೋಟಿ ಸಾಲ ಪಡೆದ ಭಾರಿ ಅಕ್ರಮವೊಂದು ಬೆಳಕಿಗೆ ಬಂದಿದ್ದು, ಈ ಕುರಿತು ಮುಡಾ ಅಧಿಕಾರಿಗಳು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅಕ್ರಮವನ್ನು  ದಾಖಲೆ ಸಮೇತ ಬಯಲಿಗೆಳೆದಿದ್ದಾರೆ.

ಮೈಸೂರು ನಗರ ಇಂಡಸ್ಟ್ರಿಯಲ್ ಸಬರ್ಬ್ 2 ನೇ ಹಂತ ವಿಶ್ವೇಶ್ವರನಗರದ ಶ್ರೀ ಜಯಚಾಮರಾಜೇಂದ್ರ ಪಿಯು ಕಾಲೇಜು ಶಾರದಾ ವಿದ್ಯಾಮಂದಿರ ಮುಂಭಾಗವಿರುವ ಕೈಗಾರಿಕಾ ನಿವೇಶನ ಸಂಖ್ಯೆ 36/A  285*200 ಅಡಿ ವಿಸ್ತೀರ್ಣ 57 ಸಾವಿರ ಚದರಡಿ ಅಳತೆಯ ನಿವೇಶನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿ. ಪ್ರಾಧಿಕಾರದ ದಾಖಲೆಗಳ ಪ್ರಕಾರ ಈ ವರೆಗೆ ಈ ನಿವೇಶನ ಯಾರಿಗೂ ಮಂಜೂರಾಗಿಲ್ಲ.ಹಲವು ಬಾರಿ ಹರಾಜಿಗೆ ಆಹ್ವಾನಿಸಿದರೂ ಪ್ರಕ್ರಿಯೆ ಯಶಸ್ವಿಯಾಗಲಿಲ್ಲ.ಇದನ್ನೇ ಬಂಡವಾಳ ಮಾಡಿಕೊಂಡ M/S ಆರ್’ಜೆಡಿಜೆ ಪ್ರಾಪರ್ಟೀಸ್ ನ ಮಾಲೀಕರಾದ ಲಕ್ಷ್ಮೇಗೌಡ, ಜಗದೀಶ್, ಶಶಿ ಹಾಗೂ ನಂಜಪ್ಪ ಇವರುಗಳು ಸದರಿ ನಿವೇಶನಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾಸನದಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ರಾಂಚ್’ನಲ್ಲಿ ಅಡವಿಟ್ಟು ಬರೋಬರಿ 14 ಕೋಟಿ ಸಾಲ ಪಡೆದಿದ್ದಾರೆ.

ದಾಖಲೆಗಳನ್ನು  ನಿಯಮಾನುಸಾರ ಪರಿಶೀಲಿಸದ ಬ್ಯಾಂಕ್ ಅಧಿಕಾರಿಗಳು 20-10-2018 ರಲ್ಲಿ ಭಾರಿ ಮೊತ್ತದ ಹಣವನ್ನೇ ಸಾಲವಾಗಿ ಕೊಟ್ಟಿದ್ದಾರೆ. ಇದಿಷ್ಟೇ ಸಾಲದೆಂಬಂತೆ ಆರ್’ಜೆಡಿಜೆ ಪ್ರಾಪರ್ಟೀಸ್ ನ ಪಾಲುದಾರ ನಂಜಪ್ಪ ನಂಜನಗೂಡಿನ ಕುಪ್ಪರವಳ್ಳಿಯ  ನಿವಾಸಿಯಾಗಿದ್ದು, 2020 ರಲ್ಲಿ ಸ್ನೇಹಿತನ ಮಗ ಹೇಮಂತರಾಜು ಎಂಬುವರಿಗೆ ದಾನಪತ್ರ ಮಾಡಿದ್ದಾನೆ. ಮುಡಾ ಆಸ್ತಿಯನ್ನು  ಬ್ಯಾಂಕ್ ನಲ್ಲಿ ಅಡವಿಟ್ಟು ಸಾಲ ಪಡೆದ ನಂತರ ಐನಾತಿಗಳು ದಾನಪತ್ರವನ್ನೂ ಸಹ ಮಾಡಿದ್ದಾರೆ.

ಇವೆಲ್ಲಾ ಅಕ್ರಮವನ್ನು  ಆರ್’ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆಗಳ ಸಮೇತ ಮುಡಾ ಆಯುಕ್ತ ದಿನೇಶ್ ಕುಮಾರ್ ಗೆ ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದು,  ನಂತರ ಎಚ್ಚೆತ್ತ ಆಯುಕ್ತರು ಹಾಗೂ ಕಾರ್ಯದರ್ಶಿ ವೆಂಕಟರಾಜು ದಾಖಲೆಗಳನ್ನ ಸಂಪೂರ್ಣವಾಗಿ ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಖಚಿತವಾಗಿದೆ.

ಈ ಸಂಬಂಧ ಸಾಲ ಪಡೆಯುವಾಗ ಭೂಗಳ್ಳರು ಒದಗಿಸಿರುವ ದಾಖಲೆಗಳನ್ನು ನೀಡುವಂತೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗೆ ಮುಡಾ ಆಯುಕ್ತರು ಪತ್ರ ಬರೆದಿದ್ದಾರೆ.ಈ ಪತ್ರಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಇದುವರೆಗೆ ಉತ್ತರ ಬಂದಿಲ್ಲ.

ಕೂಡಲೇ ಮುಡಾ ಆಯುಕ್ತರು ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಆರ್.ಮಂಜುನಾಥ್ ಮೂಲಕ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೇಗೌಡ, ಜಗದೀಶ, ಶಶಿ ಹಾಗೂ ನಂಜಪ್ಪ ವಿರುದ್ದ ದೂರು ದಾಖಲಿಸಿದ್ದಾರೆ.

ಮತ್ತೊಂದು ವಿಶೇಷ ಏನೆಂದರೆ ಒಂದೆಡೆ ಖದೀಮರು 2018 ರಲ್ಲಿ ಮುಡಾ ಅಧಿಕಾರಿಗಳ ಗಮನಕ್ಕೆ ಬಾರದಂತೆ ಭಾರಿ ಮೊತ್ತದ ಸಾಲ ಪಡೆದರೆ ಮತ್ತೊಂದೆಡೆ ಮುಡಾ ಅಧಿಕಾರಿಗಳು ಸದರಿ ನಿವೇಶನದ ಅಭಿವೃದ್ದಿಗಾಗಿ 2021 ರಲ್ಲಿ 4 ಲಕ್ಷ 44 ಸಾವಿರ ಖರ್ಚು ಮಾಡಿದ್ದಾರೆ.