ಮನೆ ಮನರಂಜನೆ ಮೆಜೆಸ್ಟಿಕ್ ಚಿತ್ರಕ್ಕೆ 20 ವರ್ಷ: ರಿರಿಲೀಸ್ ಗೆ ಸಿದ್ದತೆ

ಮೆಜೆಸ್ಟಿಕ್ ಚಿತ್ರಕ್ಕೆ 20 ವರ್ಷ: ರಿರಿಲೀಸ್ ಗೆ ಸಿದ್ದತೆ

0

ಚಾಲೆಂಜಿಂಗ್‌ ಸ್ಟಾರ್‌, ಅಭಿಮಾನಿಗಳ ಪಾಲಿನ ‘ಡಿ ಬಾಸ್‌’, ‘ದಚ್ಚು’.. ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡ ಮೊದಲ ಚಿತ್ರ ಮೆಜೆಸ್ಟಿಕ್ ಗೆ ಇಂದಿಗೆ(ಫೆ.8) 20 ವರ್ಷ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ಸಿನಿಮಾ ರಿರಿಲೀಸ್‌ ಆಗುವ ಸೂಚನೆಯನ್ನು ದರ್ಶನ್‌ ಅವರು ಟ್ವಿಟರ್‌ನಲ್ಲಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಿಮ್ಮೆಲ್ಲರ ಮನದಂಗಳಕ್ಕೆ ‘ದಾಸ’ನಾಗಿ ಇಟ್ಟ ಮೊದಲ ಹೆಜ್ಜೆ ‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತಹ ಒಳ್ಳೆ ಬುನಾದಿಯನ್ನು ನೀಡಿದ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ’ ಎಂದಿದ್ದಾರೆ.

ರಂಗಭೂಮಿ, ಧಾರಾವಾಹಿಯಲ್ಲಿ ನಟಿಸಿ ಬಣ್ಣದಲೋಕ ಪ್ರವೇಶಿಸಿದ್ದ ದರ್ಶನ್‌ ಅವರು, ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್‌ ಬಳಿ ಅಸಿಸ್ಟೆಂಟ್ ಕ್ಯಾಮೆರಾಮನ್‌ ಆಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದರು. ಲೈಟ್‌ಬಾಯ್‌ ಆಗಿ ಚಿತ್ರರಂಗದಲ್ಲಿ ದುಡಿದಿದ್ದ ದರ್ಶನ್‌, ನಾಯಕನಾಗುವುದಕ್ಕೂ ಮುನ್ನ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಅವರ ವೃತ್ತಿಬದುಕಿಗೆ ತಿರುವು ನೀಡಿದ ಚಿತ್ರ ‘ಮೆಜೆಸ್ಟಿಕ್’. ಪಿ.ಎನ್.‌ ಸತ್ಯ ‌ನಿರ್ದೇಶನದ‌‌ ಈ‌ ಸಿನಿಮಾ 2002ರ ಫೆ. 8ರಂದು ತೆರೆಕಂಡಿತ್ತು. ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿತು.

ಅಲ್ಲಿಂದ ಇಲ್ಲಿಯವರೆಗೂ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ದರ್ಶನ್‌, ಇದೀಗ ತಮ್ಮ 55ನೇ ಸಿನಿಮಾ ‘ಕ್ರಾಂತಿ’ಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ.

ಹಿಂದಿನ ಲೇಖನರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಸಿಎಂ ಬೊಮ್ಮಾಯಿ
ಮುಂದಿನ ಲೇಖನಹಿಜಾಬ್ ವಿವಾದ; ಭಗದ್ಗೀತೆಗಿಂತ ಸಂವಿಧಾನವೇ ಮೇಲು : ಹೈಕೋರ್ಟ್