ಬೆಂಗಳೂರು: ಪ್ರವಾಹ, ಭೂಕಂಪ, ಭೂಕುಸಿತ, ಅತಿವೃಷ್ಟಿ ಸೇರಿದಂತೆ ವಿವಿಧ ಪ್ರಾಕೃತಿಕ ವಿಕೋಪಗಳು ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜನರಿಗೆ ತಕ್ಷಣ ಎಚ್ಚರಿಕೆ ನೀಡುವ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿಗೊಳ್ಳುತ್ತಿದೆ. ಇದರ ಭಾಗವಾಗಿ, ಬೆಂಗಳೂರಿನ ಜನರ ಮೊಬೈಲ್‌ಗಳಿಗೆ ಶೀಘ್ರದಲ್ಲೇ ಎಚ್ಚರಿಕೆ ಸಂದೇಶಗಳು ಬರಲಿವೆ.
ದೂರಸಂಪರ್ಕ ಇಲಾಖೆ (DoT) ನೇತೃತ್ವದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ (C-DOT) ಸಹಯೋಗದೊಂದಿಗೆ ಮೊಬೈಲ್ ಆಧಾರಿತ ವಿಪತ್ತು ಎಚ್ಚರಿಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಹಠಾತ್ ಪ್ರವಾಹ, ಭೂಕಂಪ, ಸುನಾಮಿ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಹಾಗೂ ಅನಿಲ ಸೋರಿಕೆ, ರಾಸಾಯನಿಕ ಅಪಾಯಗಳಂತಹ ಮಾನವ ನಿರ್ಮಿತ ಅವಘಡಗಳ ಸಂದರ್ಭಗಳಲ್ಲಿ ಜನರಿಗೆ ತಕ್ಷಣ ಮಾಹಿತಿ ತಲುಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಹಿನ್ನೆಲೆಯಲ್ಲಿ ‘ಸೆಲ್ ಬ್ರಾಡ್‌ಕಾಸ್ಟ್’ (Cell Broadcast – CB) ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿ, ನಿರ್ದಿಷ್ಟ ಪ್ರದೇಶದಲ್ಲಿರುವ ಎಲ್ಲಾ ಮೊಬೈಲ್ ಸಾಧನಗಳಿಗೆ ಒಂದೇ ಸಮಯದಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಇದರಿಂದ ನೈಜ ಸಮಯದಲ್ಲಿ ಮಾಹಿತಿ ತಲುಪುವಂತೆ ಮಾಡಲಾಗುತ್ತದೆ. ವಿಶೇಷವಾಗಿ, ಈ ವ್ಯವಸ್ಥೆ ಸಂಪೂರ್ಣವಾಗಿ ಸೆಲ್ಯುಲರ್ ನೆಟ್ವರ್ಕ್‌ಗಳ ಮೂಲಕ ಕಾರ್ಯನಿರ್ವಹಿಸುವುದರಿಂದ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ.
ಇದು ‘ಸಚೇತ್’ (SACHET) ಎಂಬ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್‌ನ ಭಾಗವಾಗಿದ್ದು, ದೇಶದಾದ್ಯಂತ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಯ ಅಂಗವಾಗಿ, ಮೇ 2ರಂದು ಬೆಂಗಳೂರಿನ ನಾಗರಿಕರು ತಮ್ಮ ಮೊಬೈಲ್ ಸಾಧನಗಳಲ್ಲಿ “ಟೆಸ್ಟ್” ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಲಿದ್ದಾರೆ.
ಈ ಸಂದೇಶಗಳು ಕೇವಲ ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿದ್ದು, ಸಾರ್ವಜನಿಕರು ಯಾವುದೇ ಕ್ರಮ ಕೈಗೊಳ್ಳಬೇಕಾಗಿಲ್ಲ. ವಿಪತ್ತು ಸಂದರ್ಭದಲ್ಲಿ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಹಿತಿ ಹಂಚುವ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯವಸ್ಥೆಯ ಪ್ರಮುಖ ವಿಶೇಷತೆಗಳು:
ತುರ್ತು ಪರಿಸ್ಥಿತಿ ಅಥವಾ ಪ್ರಕೃತಿ ವಿಕೋಪ ಸಂಭವಿಸಿದಾಗ, ಅದರ ಪರಿಣಾಮಕ್ಕೆ ಒಳಗಾದ ಪ್ರದೇಶದಲ್ಲಿರುವ ಜನರ ಮೊಬೈಲ್‌ಗಳಿಗೆ ನೇರವಾಗಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತದೆ. 2G, 3G, 4G ಹಾಗೂ 5G ಸಿಮ್‌ಗಳನ್ನು ಬಳಸುವ ಎಲ್ಲ ಮೊಬೈಲ್‌ಗಳಲ್ಲೂ ಈ ಸಂದೇಶಗಳು ತಲುಪುತ್ತವೆ.
ಹೆಚ್ಚುವರಿ ಆಪ್ ಅಗತ್ಯವಿಲ್ಲ:
ಈ ಎಚ್ಚರಿಕೆ ಸಂದೇಶಗಳನ್ನು ಪಡೆಯಲು ಯಾವುದೇ ಆಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಜೊತೆಗೆ, ಇಂಟರ್ನೆಟ್ ಸಂಪರ್ಕವೂ ಅಗತ್ಯವಿಲ್ಲ. ಮೊಬೈಲ್‌ನಲ್ಲಿ ಸಕ್ರಿಯ ಸಿಮ್ ಇದ್ದರೆ ಸಾಕು, ಸಂದೇಶಗಳು ಸ್ವಯಂಚಾಲಿತವಾಗಿ ತಲುಪುತ್ತವೆ.
ಈ ವ್ಯವಸ್ಥೆ ದೂರಸಂಪರ್ಕ ಕಂಪನಿಗಳ ನೆಟ್ವರ್ಕ್ ಟವರ್‌ಗಳ ಮೂಲಕ ಕಾರ್ಯನಿರ್ವಹಿಸಲಿದ್ದು, ಟವರ್‌ನಿಂದ ಪ್ರಸಾರವಾಗುವ ಸಂದೇಶಗಳನ್ನು ಮೊಬೈಲ್ ಸಾಧನಗಳು ನೇರವಾಗಿ ಸ್ವೀಕರಿಸುತ್ತವೆ.
ಆತಂಕ ಬೇಡ:
ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ ಈ ಸಂದೇಶಗಳನ್ನು ಒಂದೇ ಸಮಯದಲ್ಲಿ ಎಲ್ಲರಿಗೂ ಕಳುಹಿಸಲಾಗುತ್ತಿದೆ. ಆದ್ದರಿಂದ ಮೊಬೈಲ್‌ನಲ್ಲಿ ಬೀಪ್ ಸೌಂಡ್ ಅಥವಾ ಎಚ್ಚರಿಕೆ ಸಂದೇಶ ಬಂದರೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬರಿಗೂ ಈ ಸಂದೇಶ ತಲುಪಲಿದ್ದು, ಕೆಲವೇ ನಿಮಿಷಗಳ ಕಾಲ ಅದು ಕಾಣಿಸಿಕೊಳ್ಳುತ್ತದೆ.
ಸಾರ್ವಜನಿಕರು ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜನರ ಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣ ಮಾಹಿತಿ ತಲುಪಿಸುವ ಉದ್ದೇಶದಿಂದ ಈ ಮಹತ್ವದ ಕ್ರಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಎನ್‌ಡಿಎಂಎ ತಿಳಿಸಿದೆ.















