ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ ನಲ್ಲಿ ಸ್ವೀಕೃತವಾಗಿದ್ದ ದಾಖಲೆ ಇಲ್ಲದ 8 ಲಕ್ಷ ರೂ. ಮೌಲ್ಯದ 480 ಮಿಕ್ಸರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹುಬ್ಬಳ್ಳಿ (ಪೂರ್ವ) ವಿಧಾನಸಭಾ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ರೈಲ್ವೆ ಪಾರ್ಸಲ್ ಆಫೀಸ್ ನಲ್ಲಿ ಅನಧಿಕೃತವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳು ಸ್ವೀಕೃತವಾಗಿವೆ ಎಂಬ ದೂರು ಬಂದಿತ್ತು. ಚುನಾವಣಾ ಕರ್ತವ್ಯದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು ಮತ್ತು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಈ ಮಾಹಿತಿ ಬಂದ ತಕ್ಷಣ ಶುಕ್ರವಾರ ಸಂಜೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾದ ಬಸವರಾಜ ಚಿತ್ತರಗಿ ಅವರು ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು.
ಈ ವೇಳೆ ಒಟ್ಟು 24 ರಟ್ಟಿನ ಬಾಕ್ಸ್ ಗಳಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ 480 ಮಿಕ್ಸರ್ ಗಳು ಸ್ವೀಕೃತವಾಗಿದ್ದು, ಅವುಗಳಿಗೆ ಯಾವುದೇ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡುಬಂದಿರುತ್ತದೆ.
ಈ ವಸ್ತುಗಳನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತದಾರರಿಗೆ ಉಚಿತವಾಗಿ ಹಂಚುವ ಸಲುವಾಗಿ ತರಸಿರುವ ಅನುಮಾನದ ಮೇಲೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ವಸ್ತುಗಳನ್ನು ಯಾರು ತರಿಸಿದ್ದರು ಎಂಬ ಕುರಿತು ತನಿಖೆ ನಡೆಯುತ್ತಿದೆ.