ಮನೆ ಸುದ್ದಿ ಜಾಲ ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾ ಸೇನೆ ಸೇರಿದ್ದ 217 ಭಾರತೀಯರಲ್ಲಿ 49 ಯೋಧರ ಸಾವು

ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾ ಸೇನೆ ಸೇರಿದ್ದ 217 ಭಾರತೀಯರಲ್ಲಿ 49 ಯೋಧರ ಸಾವು

0

ನವದೆಹಲಿ: ಉಕ್ರೇನ್‌ನೊಂದಿಗಿನ ಯುದ್ಧದ ನಡುವೆಯೇ 217 ಭಾರತೀಯರು ರಷ್ಯಾ ಸೇನೆಯನ್ನು ಸೇರಿಕೊಂಡಿದ್ದಾರೆ. ಅದರಲ್ಲಿ 49 ಜನರು ಸಂಘರ್ಷದ ವೇಳೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ಈ ಕುರಿತು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಭಾರತ ಸರ್ಕಾರವು ನಿರಂತರ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡ ಕಾರಣ, ರಷ್ಯಾದ ಸೇನೆಗೆ ಸೇರಲು ಸಹಿ ಹಾಕಿದ್ದ 139 ಭಾರತೀಯ ಪ್ರಜೆಗಳು ಈಗಾಗಲೇ ಬಿಡುಗಡೆಗೊಂಡಿದ್ದಾರೆ ಎಂದು ತಿಳಿಸಿದೆ. ರಷ್ಯಾದಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯರನ್ನು ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ಹೋರಾಡಲು ಬಲವಂತವಾಗಿ ಕಳಿಸಲಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ, ಕೇಂದ್ರ ಸರ್ಕಾರವು ವರದಿ ಸಲ್ಲಿಸಿದೆ ಎನ್ನಲಾಗುತ್ತಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಸುಮಾರು 217 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳನ್ನು ಸೇರಿದ್ದಾರೆ ಎಂದು ವರದಿಯಾಗಿದೆ ಎಂದು ತಿಳಿಸಿದೆ. ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ 49 ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದು, 6 ಮಂದಿ ಕಾಣೆಯಾಗಿದ್ದಾರೆ ಎಂದು ರಷ್ಯಾ ದೃಢಪಡಿಸಿದೆ. ಇನ್ನೂ 23 ವ್ಯಕ್ತಿಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ. ಮಾಸ್ಕೋದಲ್ಲಿರುವ ಭಾರತದ ರಾಯಭಾರ ಕಚೇರಿಯು ರಷ್ಯಾದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಮೃತದೇಹಗಳನ್ನು ಗುರುತಿಸಲು ಅನುಕೂಲವಾಗುವಂತೆ, 21 ವ್ಯಕ್ತಿಗಳ ಕುಟುಂಬ ಸದಸ್ಯರ ಡಿಎನ್‌ಎ ವರದಿಗಳನ್ನು ಸಂಗ್ರಹಿಸಿ ರಷ್ಯಾದ ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಸಹಾಯದಿಂದ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ ಎನ್ನಲಾಗುತ್ತಿದೆ.