ಮನೆ ರಾಜಕೀಯ ಮಂಡ್ಯ ಪತ್ರಕರ್ತರ ಸಂಘಕ್ಕೆ 5 ಲಕ್ಷ ರೂ.: ದಿನೇಶ್ ಗೂಳಿಗೌಡ

ಮಂಡ್ಯ ಪತ್ರಕರ್ತರ ಸಂಘಕ್ಕೆ 5 ಲಕ್ಷ ರೂ.: ದಿನೇಶ್ ಗೂಳಿಗೌಡ

0

ಮಂಡ್ಯ: ವಿಧಾನ ಪರಿಷತ್ ಸದಸ್ಯರಿಗೆ ಇರುವ ಅನುದಾನ ಬಿಡುಗಡೆಗೊಂಡ ತಕ್ಷಣ ಪ್ರಪ್ರಥಮವಾಗಿ 5 ಲಕ್ಷ ರೂಪಾಯಿಯನ್ನು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕಾಗಿ ಮಂಜೂರು ಮಾಡಲಿದ್ದೇನೆ ಎಂದು ವಿಧಾನ ಪರಿಷತ್ ನೂತನ ಸದಸ್ಯರಾದ ದಿನೇಶ್ ಗೂಳಿಗೌಡ ಘೋಷಿಸಿದರು.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಅವರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾ ಶಿವನಂದ ತಗಡೂರು ಹಾಗೂ ಮಂಡ್ಯದ ನವೀನ್ ಅವರ ಮನವಿ ಮೇರೆಗೆ, ಅನುದಾನ ಬರುತ್ತಿದ್ದಂತೆ ಕೊಡುಗೆ ನೀಡುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥನಾಗಿ ಕಳೆದ 16 ವರ್ಷಗಳಿಂದ ಪತ್ರಿಕೆಗಳು, ಮಾಧ್ಯಮಗಳು ಹಾಗೂ ಪತ್ರಕರ್ತರನ್ನು ನಾನು ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ಪತ್ರಕರ್ತರ ಕಷ್ಟ-ಸುಖಗಳನ್ನು ಬಹಳ ಸಮೀಪದಿಂದ ಕಂಡಿದ್ದೇನೆ. ಪತ್ರಕರ್ತರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆ ಪತ್ರಿಕಾರಂಗವನ್ನು ನಾಲ್ಕನೇ ಅಂಗ ಎಂದು ಹೇಳುತ್ತಾರೆ. ಆದರೆ, ನಾನು ಇದನ್ನು ಪ್ರಜಾಪ್ರಭುತ್ವದ ಮೊದಲನೇ ಅಂಗ ಎಂದೇ ಭಾವಿಸುತ್ತೇನೆ. ರಾಜ್ಯಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ವರೆಗೆ ಒಂದು ಸರ್ಕಾರವನ್ನೇ ಬದಲಾಯಿಸುವ ಶಕ್ತಿ ಮಾಧ್ಯಮಕ್ಕಿದೆ. ಇದನ್ನು ನಾನು ಕೇಳಿದ್ದೇನೆ ಮತ್ತು ಪ್ರತ್ಯಕ್ಷವಾಗಿ ಕಂಡಿದ್ದೇನೆ ಎಂದು ದಿನೇಶ್ ಗೂಳಿಗೌಡ ತಿಳಿಸಿದರು.

ಮಾಧ್ಯಮಗಳ ಜವಾಬ್ದಾರಿ ಎಷ್ಟಿದೆ ಎಂಬುದನ್ನೂ ಕಂಡುಕೊಂಡಿದ್ದೇನೆ. ಅದೇ ರೀತಿ ಪತ್ರಕರ್ತರ ಬದುಕನ್ನೂ ಅರಿತಿದ್ದೇನೆ. ಪತ್ರಕರ್ತರು ಸೈನಿಕರಿದ್ದಂತೆ, ಇನ್ನೇನು ರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುತ್ತಿರುತ್ತದೆ. ಆಗ ಯಾವುದಾದರೂ ಪ್ರಮುಖ ಘಟನೆಗಳು ನಡೆದರೆ ಸಮರೋಪಾದಿಯಲ್ಲಿ ಅವರು ಕಾರ್ಯನಿರ್ವಹಿಸಿ ಸ್ಥಳಕ್ಕೆ ಧಾವಿಸಿ, ಪತ್ರಿಕಾ ಕಚೇರಿಗೆ ತಲುಪಿಸಿ, ಕಚೇರಿಯೊಳಗಿರುವ ಪತ್ರಕರ್ತರು ಅದನ್ನು ಅಚ್ಚುಕಟ್ಟಾಗಿ ರೂಪಿಸುವಂತಹ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ಪತ್ರಕರ್ತರ ಕಾರ್ಯಕ್ಕೆ ನನ್ನದೊಂದು ಸಲಾಂ ಎಂದು ಹೇಳಿದರು.

ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗುತ್ತಾರೆ. ಡಾಕ್ಟರ್ ಮಕ್ಕಳು ಡಾಕ್ಟರ್ ಆಗುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಿದ್ದಾರೆ. ಆದರೆ, ಪತ್ರಕರ್ತರ ಮಕ್ಕಳು ಪತ್ರಕರ್ತರಾಗುವುದು ಬೇಡ. ಬೆಳಗ್ಗೆ ಆರು ಗಂಟೆಯಿಂದ ಕೆಲಸ ಶುರವಾದರೆ, ರಾತ್ರಿ ಮುಗಿಯುವುದಕ್ಕೂ ಸಮಯ ಇರುವುದಿಲ್ಲ. ಹೀಗಾಗಿ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ಈ ಕಾರಣಕ್ಕೆ ಪತ್ರಕರ್ತರ ಮಕ್ಕಳಿಗೆ ಉತ್ತಮ ವೃತ್ತಿ ಶಿಕ್ಷಣ ದೊರೆಯಬೇಕು. ಅವರಿಗೆ ಒಂದೊಳ್ಳೆ ಭವಿಷ್ಯ ಸಿಗಬೇಕು ಎಂದು ದಿನೇಶ್ ಗೂಳಿಗೌಡ ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡರೂ  ಮತ್ತು ನಾನು ಈ ಬಾರಿ ಪತ್ರಕರ್ತರ ಪಿಂಚಣಿಯನ್ನು ಹೆಚ್ಚು ಮಾಡಲು ಬರುವ ಅಧಿವೇಶನದಲ್ಲಿ ಸದನದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ದಿನೇಶ್ ಗೂಳಿಗೌಡ ಅವರು ತಿಳಿಸಿದರು.

ಕೊರೋನಾದ ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಅನೇಕ ಜಾಗೃತಿಯನ್ನು ಮೂಡಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಬಿತ್ತರಿಸಲಾಗಿದೆ. ಕೊರೋನಾ ನಿಗ್ರಹದಲ್ಲಿ ಸರ್ಕಾರ, ಸಾರ್ವಜನಿಕರ ಪಾತ್ರವನ್ನು ಎತ್ತಿ ತೋರಿಸಿದೆ. ತಮ್ಮ ಜೀವವನ್ನೂ ಲೆಕ್ಕಿಸದೆ ಎಲ್ಲ ಕಡೆಗಳಿಗೂ ಹೋಗಿ ವರದಿ ಮಾಡುವ ಮುಖಾಂತರ ಕಾರ್ಯನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ವಿಚಾರ. ಹೀಗಾಗಿ ಪತ್ರಕರ್ತರ ನೆರವಿಗೆ ಸರ್ಕಾರ ಬರಬೇಕು ಎಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ.

ಈ ಎಲ್ಲದರ ಮಧ್ಯೆ ಮಂಡ್ಯ ಕಾರ್ಯನಿರತ ಪತ್ರಕರ್ತರ ಸಂಘದವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಸಂತಸದಾಯ ವಿಚಾರವಾಗಿದೆ. ಶೈಕ್ಷಣಿಕವಾಗಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇನ್ನು ಮುಂದೂ ಸಹ ಇಂತಹ ಅನೇಕ ಕಾರ್ಯಕ್ರಮಗಳು ಈ ಪತ್ರಿಕಾ ಸಂಘದಿಂದ ಆಗಲಿ ಎಂದು ಆಶಿಸುವೆ.