ಮೈಸೂರು : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಫಲಾನುಭವಿಗಳ ನೈಜತೆ ಪರಿಶೀಲನೆಯಲ್ಲಿ ಬರೋಬ್ಬರಿ 581 ಮಂದಿ ಅನರ್ಹರು ಪತ್ತೆಯಾಗಿದ್ದು, ಅವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಉದ್ಯೋಗದ ಜತೆಗೆ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದವರನ್ನು ಸಹ ಪತ್ತೆ ಹಚ್ಚಲಾಗಿದೆ.
ಉದ್ಯೋಗ ಸಿಗದೇ ಡಿಪ್ಲೊಮಾ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಅತಂತ್ರರಾಗಿದ್ದು, ಅವರಿಗೆ ಆರ್ಥಿಕವಾಗಿ ಭದ್ರತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಯುವ ನಿಧಿ ಯೋಜನೆಯನ್ನು ಆರಂಭಿಸಿ, ಅವರಿಗೆ ನಿರುದ್ಯೋಗ ಭತ್ಯೆ ನೀಡುವ ಕೆಲಸವನ್ನು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಮಾಡುತ್ತಿದೆ. ಆದರೆ, ಉದ್ಯೋಗ ಪಡೆದು ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದ 427 ಮಂದಿ ಫಲಾನುಭವಿಗಳನ್ನು ನೈಜತೆ ಪರಿಶೀಲನೆ ವೇಳೆ ಗುರುತಿಸಿರುವ ಇಲಾಖೆ ಅವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಟ್ಟಿದೆ.
ಇದರೊಂದಿಗೆ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾದ 153 ಮಂದಿ ವಿದ್ಯಾರ್ಥಿಗಳು ಮತ್ತು ಸ್ವಯಂ ಉದ್ಯೋಗ ಆರಂಭಿಸಿದ ಒಬ್ಬರನ್ನು ಪತ್ತೆ ಹಚ್ಚಿ ಫಲಾನುಭವಿಗಳ ಪಟ್ಟಿಯಿಂದ ತೆರವುಗೊಳಿಸಲಾಗಿದೆ ಎಂದು ಉದ್ಯೋಗ ಮತ್ತು ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕಿ ರಾಣಿ ಎನ್ನುತ್ತಾರೆ. ಯುವ ನಿಧಿ ಯೋಜನೆ ರೂಪಿಸಿ ಮೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಯೋಜನೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಮತ್ತು ಫಲಾನುಭವಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಯುವ ನಿಧಿ ಫ್ಲಸ್ ಎಂಬ ಯೋಜನೆಯನ್ನು ಆರಂಭಿಸಿ ಅವರಿಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ಸಂಪರ್ಕಿಸುವ ಪ್ರಯತ್ನ ನಡೆಸಿತ್ತು.
ಈ ವೇಳೆ ಸಾಕಷ್ಟು ಮಂದಿ ತಾವು ಬೇರೆಡೆ ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರಿಂದ ಅಂತಹವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಇದರೊಂದಿಗೆ ಪ್ರತಿ ತಿಂಗಳು ಸಹ ಫಲಾನುಭವಿಗಳು ಸ್ವಯಂ ಘೋಷಣೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಘೋಷಣೆ ಮಾಡಿಕೊಂಡಿದ್ದನ್ನು ವೆಬ್‌ಸೈಟಿನಲ್ಲಿ ದಾಖಲಿಸಬೇಕು.
ಈ ರೀತಿ ಮಾಡದ ಫಲಾನುಭವಿಗಳನ್ನು ಸಹ ಪಟ್ಟಿಯಿಂದ ತೆರವುಗೊಳಿಸಲಾಗಿದೆ. ಅರ್ಹರಿಗೆ ಮಾತ್ರ ಯುವ ನಿಧಿಯ ಸೌಲಭ್ಯ ಸಿಗಬೇಕು ಎಂದು ನಡೆಸುತ್ತಿರುವ ನೈಜತೆಯ ಪರಿಶೀಲನೆಯಿಂದ ಅರ್ಹರಿಗೆ ಸರಕಾರದ ಸೌಲಭ್ಯ ಸಿಗುವಂತೆ ಆಗಿದೆ ಎನ್ನುತ್ತಾರೆ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್. ಮೈಸೂರು ಜಿಲ್ಲೆಯಲ್ಲಿ 14,376 ಮಂದಿ ಯುವ ನಿಧಿ ಫಲಾನುಭವಿಗಳಿದ್ದು, ನೈಜತೆ ಪರಿಶೀಲನೆ ವೇಳೆ 581 ಮಂದಿಯನ್ನು ಅನರ್ಹರೆಂದು ಪತ್ತೆಹಚ್ಚಿ ಪಟ್ಟಿಯಿಂದ ಕೈ ಬಿಡಲಾಗಿದೆ.














