ಮನೆ ಸುದ್ದಿ ಜಾಲ ಮಮತಾ ಬ್ಯಾನರ್ಜಿ  : ಕಾಂಗ್ರೆಸ್​ ಜೊತೆಗೆ ಟಿಎಂಸಿ ವಿಲೀನ ವದಂತಿ

ಮಮತಾ ಬ್ಯಾನರ್ಜಿ  : ಕಾಂಗ್ರೆಸ್​ ಜೊತೆಗೆ ಟಿಎಂಸಿ ವಿಲೀನ ವದಂತಿ

0

ನವದೆಹಲಿ: ಪಕ್ಷದಲ್ಲಿ ಆಂತರಿಕ ಬಂಡಾಯ ಭುಗಿಲೆದ್ದಿರುವ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್​ ಪಕ್ಷವು ಕಾಂಗ್ರೆಸ್​ ಜೊತೆಗೆ ವಿಲೀನ ಆಗಲಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಮಮತಾ ಬ್ಯಾನರ್ಜಿ ತೆರೆ ಏಳೆದಿದ್ದಾರೆ. ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ ವದಂತಿಯು ಆಧಾರ ರಹಿತ ಮಾಹಿತಿ. ಈ ರೀತಿಯ ಯಾವುದೇ ಯೋಜನೆಯನ್ನು ಇಲ್ಲ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಟಿಎಂಸಿಯಲ್ಲಿನ ಸಂಸದರು ಎನ್​ಡಿಎಗೆ ಬೆಂಬಲಿಸಿದ ಘಟನೆ ನಡುವೆ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಭೇಟಿಯಾಗಿ, ಇಬ್ಬರು ನಾಯಕರು ಅಪ್ಪಿಕೊಂಡಿರುವ ಛಾಯಾಚಿತ್ರವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು ಎನ್ನಲಾಗಿದೆ.

ಹಾಗೂ ಆ ಬಳಿಕ ಪಕ್ಷಗಳ ವಿಲೀನದ ಬಗ್ಗೆ ಊಹಾಪೋಗಳು ಹರಿದಾಡುತ್ತಿವೆ. ಮಮತಾ ಬೆನ್ನಲ್ಲೇ ಕಾಂಗ್ರೆಸ್ ಸಂವಹನ​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​​ ಕೂಡ ಈ ಮಾಹಿತಿಯನ್ನು ನಿರಾಕರಿಸಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಭೆಯ ಕುರಿತು ವರದಿಗಳು ಸಂಪೂರ್ಣವಾಗಿ ತಪ್ಪಾಗಿವೆ. ಅವರಿಬ್ಬರದ್ದು ಸೌಹರ್ದಯುತ ಭೇಟಿಯಾಗಿತ್ತು. ಅವರಿಬ್ಬರ ನಡುವಿನ ದೀರ್ಘ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಅನೇಕ ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಎಕ್ಸ್​ ಜಾಲತಾಣದಲ್ಲಿ ತಿಳಿಸಿದ್ದಾರೆ. ಇಂಡಿಯಾ ಒಕ್ಕೂಟ ಸಭೆಯಲ್ಲಿ ಭಾಗಿಯಾದ ಇಬ್ಬರು ಹಿರಿಯ ನಾಯಕರು ಒಗ್ಗಟ್ಟು ಮತ್ತು ಏಕತೆಯ ಕುರಿತು ಒತ್ತಿ ಹೇಳಿದ್ದು, ವಿವಿಧ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ಎದುರಿಸಲು ಇಂಡಿಯಾ ಬಣ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು ಎಂದು ಮೂಲಗಳು ತಿಳಿಸಿದೆ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಹಿನ್ನೆಲೆ ಈ ಎಲ್ಲಾ ಬೆಳವಣಿಗೆಗಳನ್ನು ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ನಡೆಯುತ್ತಿರುವ ಮಾತುಕತೆ ಭಾಗವಾಗಿ ನೋಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಟಿಎಂಸಿ ಆಂತರಿಕ ಬಂಡಾಯವನ್ನು ಎದುರಿಸುತ್ತಿರುವಾಗ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್​​ನಿಂದ ಬೇರ್ಪಟ್ಟ ನಂತರ ಬ್ಯಾನರ್ಜಿ 1998ರಲ್ಲಿ ತೃಣಮೂಲ ಕಾಂಗ್ರೆಸ್​ ಪಕ್ಷ ಕಟ್ಟಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಸಿದರು. ಟಿಎಂಸಿಯು 2011 ರಲ್ಲಿ ರಾಜ್ಯದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ಅಧಿಕಾರಕ್ಕೆ ಏರಿತು. 15 ವರ್ಷಗಳ ಕಾಲ ರಾಜ್ಯದಲ್ಲಿ ನಿರಂತರ ಆಡಳಿತ ನಡೆಸಿದ ಟಿಎಂಸಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿತು. ಈ ಸೋಲಿನ ಬೆನ್ನಲ್ಲೇ ಪಕ್ಷದಲ್ಲಿ ಆಂತರಿಕ ಭಿನ್ನಮತಗಳು ಬಹಿರಂಗಗೊಂಡವು. ಪಕ್ಷದ 80 ಶಾಸಕರಲ್ಲಿ 58 ಮಂದಿ ಶಾಸಕರು ಅಧಿಕೃತ ಟಿಎಂಸಿ ಶಾಸಕಾಂಗ ಪಕ್ಷದಿಂದ ಬೇರ್ಪಟ್ಟ, ಉಚ್ಚಾಟಿತ ಶಾಸಕ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಮಾನ್ಯತೆ ಪಡೆದರು. ಈ ನಡುವೆ ಪಕ್ಷದ ಲೋಕಸಭಾ ಸಂಸದರಲ್ಲೂ ಈ ಬಂಡಾಯ ಆರಂಭವಾಯಿತು. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 20 ಬಂಡಾಯ ಸಂಸದರು ಎನ್​ಡಿಎ ಬೆಂಬಲಿಸುವುದಾಗಿ ಘೋಷಿಸಿದರು ಎನ್ನಲಾಗಿದೆ.