ಹಾವೇರಿ(Haveri): ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪ ನೀಡಿ, ಕನ್ನಡಿಗರಿಗೆ ಕೈಗಾರಿಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಗಡಿ ಭಾಗದ ಹಾಗೂ ಗಡಿ ಆಚೆಗಿನ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಿಗರ ಬದುಕು. ಪುರಾತನ, ಪ್ರಾಚನ, ಶ್ರೇಷ್ಠವಾದುದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಮತ್ತು ಪರಂಪರೆ ಹಾಗೂ ಚರಿತ್ರೆ ಇರುವಂಥದ್ದು. ಕನ್ನಡದ ಸಂಸ್ಕೃತಿಗೆ ದೊಡ್ಡ ಶಕ್ತಿ, ಅರ್ಥ, ಭಾವನೆಗಳನ್ನು ತುಂಬಿ ಹಾಗೂ ಬದುಕನ್ನು ಕೊಟ್ಟಿರುವುದು ಕನ್ನಡದ ಸಾಹಿತ್ಯ ಲೋಕ. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದ್ದು ಇದನ್ನು ಗುರುತಿಸಿ ಬೆಳೆಸಿಕೊಂಡು ಹೋಗಬೇಕಾದ್ದು ಈ ಸಮ್ಮೇಳನಗಳ ಉದ್ದೇಶ. ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಿ, ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡವನ್ನು ಆಳವಾಗಿ ಭಾರತದಲ್ಲಿ ಬಿತ್ತಬೇಕು. ಅದು ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಈ ಉದ್ದೇಶಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.
ಒಂದು ಭಾಷೆ , ಸಂಸ್ಕೃತಿ ಬೆಳೆಯಬೇಕಾದರೆ ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಬೇಕು. ಇದರಲ್ಲಿ ನಮ್ಮ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಮುಂದಿನ ಭವಿಷ್ಯವನ್ನು ನಿರ್ಮಿಸಲಬೇಕು. ಕನ್ನಡದ ಪರಂಪರೆ ಅತ್ಯಂತ ಶ್ರೀಮಂತ ಪರಂಪರೆ. ಹಾಗೂ ಕನ್ನಡ ಭಾಷೆ ಎಂದಿಗೂ ಬಡವಾಗಿಲ್ಲ. ಶತ ಶತ ಮಾನಗಳವರೆಗೆ, ಸೂರ್ಯ ಚಂದ್ರರು ಇರುವವರೆಗೂ ಕನ್ನಡ ಶ್ರೀಮಂತವಾಗಿ ಬೆಳೆಯುತ್ತಲೇ ಸಾಗುತ್ತದೆ ಎಂದು ತಿಳಿಸಿದರು.
ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ಹುಟ್ಟಿಲ್ಲ. ಹುಟ್ಟುವುದೂ ಇಲ್ಲ. ಆದ್ದರಿಂದ ಆತ್ಮವಿಶ್ವಾದಿಂದ, ಆತ್ಮಸಂಕಲ್ಪದಿಂದ ಕನ್ನಡವನ್ನು ಕಟ್ಟಿ ಬೆಳೆಸೋಣ. ಬೆಳವಣಿಗೆಯಲ್ಲಿ ನಮ್ಮದೂ ಕೊಡುಗೆ ಇರಲಿ ಎಂಬ ಭಾವನೆಯಿಂದ ಸಮ್ಮೇಳನವನ್ನು ಪ್ರಾರಂಭ ಮಾಡಬೇಕಿದೆ. ಆದಿ ಕವಿ ರನ್ನ ಪಂಪರಿಂದ ಹಿಡಿದು ಡಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದವರು ಕನ್ನಡಿಗರು. ದೇಶದ ಯಾವುದೇ ರಾಜ್ಯದಲ್ಲಿ ಎಂಟು ಜನ ಜ್ಞಾನಪೀಠ ಪ್ರಶ್ತಸ್ತಿ ಪಡೆದ ದ್ಆಹರಣೆಇಲ್ಲ. ಕನ್ನಡದ ಸಾಹಿತ್ಯದ ತ್ಮಶಕ್ತಿಯನ್ನು ತೋರಿಸುತ್ತದೆ. ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಕನ್ನಡಕ್ಕೆ ಲಭ್ಯವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲಕುಮಾರ್,ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ,ಸಂಸದ ಶಿವಕುಮಾರ ಉದಾಸಿ,ಶಾಸಕರಾದ ಅರುಣ ಪೂಜಾರ,ವಿರೂಪಾಕ್ಷಪ್ಪ ಬಳ್ಳಾರಿ,ಶ್ರೀನಿವಾಸ ಮಾನೆ,ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಸಲೀಂ ಅಹ್ಮದ್,ಆರ್.ಶಂಕರ್,ಪ್ರದೀಪ ಶೆಟ್ಟರ್ , ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ವಾಕರಸಾಸಂ ಉಪಾಧ್ಯಕ್ಷ ಬಸವರಾಜ ಕೆಲಗಾರ,ಮಾಜಿ ಸಚಿವರಾದ ಬಸವರಾಜ ಶಿವಣ್ಣವರ,ಮನೋಹರ ತಹಸೀಲ್ದಾರ,ರುದ್ರಪ್ಪ ಲಮಾಣಿ ಮತ್ತಿತರರು ವೇದಿಕೆಯಲ್ಲಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ,ಶಾಸಕ ನೆಹರು ಓಲೇಕಾರ ಸ್ವಾಗತಿಸಿದರು,ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಆಶಯ ಮಾತುಗಳನ್ನಾಡಿದರು.