ಮನೆ ಸುದ್ದಿ ಜಾಲ ಹಲವೆಡೆ ದಾಳಿಗೆ ಸಂಚು ಮಾಡಿದ್ದ 9 ಮಂದಿ ಶಂಕಿತ ಉಗ್ರರ ಬಂಧನ : ನವದೆಹಲಿ

ಹಲವೆಡೆ ದಾಳಿಗೆ ಸಂಚು ಮಾಡಿದ್ದ 9 ಮಂದಿ ಶಂಕಿತ ಉಗ್ರರ ಬಂಧನ : ನವದೆಹಲಿ

0

ನವದೆಹಲಿ ಮೇ 30: ಐಸಿಸ್​​ ಹಾಗೂ ಮುಂಬೈ ಭೂಗತ ಜಗತ್ತಿನ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ  ಪೊಲೀಸ್ ವಿಶೇಷ ಘಟಕ 9 ಶಂಕಿತ ಉಗ್ರರನ್ನು ಬಂಧಿಸಿದೆ. ಬಂಧಿತರು ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ವಚಾರವೂ ತನಿಖೆಯ ವೇಳೆ ಬಯಲಿಗೆ ಬಂದಿದೆ. ತನಿಖಾಧಿಕಾರಿಗಳ ಪ್ರಕಾರ, ಈ ಗುಂಪು ಗಡಿಯಲ್ಲಿರುವ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದು, ಆತಂಕ ಸೃಷ್ಟಿಸಿ ಭದ್ರತಾ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ನಿಟ್ಟಿನಲ್ಲಿ ದಾಳಿಗಳನ್ನು ನಡೆಸುವ ಜವಾಬ್ದಾರಿ ಅವರಿಗೆ ನೀಡಲಾಗಿತ್ತು. ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ವಿಶೇಷ ಘಟಕವು ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಬಂಧಿತರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಅತ್ಯಾಧುನಿಕ ಪಿಸ್ತೂಲ್‌ಗಳು, ಗ್ರೆನೇಡ್‌ಗಳು ಸೇರಿ ಉಗ್ರ ಚಟುವಟಿಕೆಗಳಿಗೆ ಬಳಸುವ ಇತರ ಸಾಮಗ್ರಿಗಳೂ ಸೇರಿವೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಪಾಕಿಸ್ತಾನ ಬೆಂಬಲಿತ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಸಂಭಾವ್ಯ ದಾಳಿ ಬಗ್ಗೆ ನಿರ್ದೇಶನಗಳನ್ನು ಪಡೆಯುತ್ತಿದ್ದರು ಎಂಬುದು ಗೊತ್ತಾಗಿದೆ. ಮೂಲಗಳ ಪ್ರಕಾರ, ಬಂಧಿತರಲ್ಲಿ ದೆಹಲಿ, ಮಹಾರಾಷ್ಟ್ರ ಹಾಗೂ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ನಿವಾಸಿಗಳು ಸೇರಿದ್ದಾರೆ. ಕೆಲ ವಿದೇಶಿ ಪ್ರಜೆಗಳೂ ಇದ್ದಾರೆ ಎನ್ನಲಾಗಿದ್ದು, ಅವರ ಗುರುತು ಹಾಗೂ ರಾಷ್ಟ್ರೀಯತೆಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಆರೋಪಿಗಳು ಮತ್ತು ಮುಂಬೈ ಭೂಗತ ಜಗತ್ತಿನ ನಡುವಿನ ಸಂಬಂಧಗಳ ಕುರಿತೂ ತನಿಖೆ ನಡೆಸಲಾಗುತ್ತಿದೆ.

ಹಾಗೂ ಶಂಕಿತ ಉಗ್ರರ ಹಣಕಾಸಿನ ವ್ಯವಹಾರ, ಸಂವಹನ ದಾಖಲೆಗಳು ಹಾಗೂಇವರ ಸಂಪರ್ಕಗಳನ್ನು ಪರಿಶೀಲಿಸಲಾಗುತ್ತಿದೆ. ದೇಶದ ಇತರೆ ಭಾಗಗಳಲ್ಲಿಯೂ ಇನ್ನಷ್ಟು ಕಾರ್ಯಕರ್ತರು ಸಕ್ರಿಯರಾಗಿದ್ದಾರೆಯೇ ಹಾಗೂ ಸಂಭಾವ್ಯ ಗುರಿಗಳ ಕುರಿತು ಪೂರ್ವ ಪರಿಶೀಲನೆ ನಡೆಸಲಾಗಿದೆಯೇ ಎಂಬುದನ್ನೂ ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಘಟನೆ ಬೆನ್ನಲ್ಲೇ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಜಾಲದ ವ್ಯಾಪ್ತಿ ಹಾಗೂ ಸಂಪರ್ಕಗಳ ಕುರಿತು ಗುಪ್ತಚರ ಸಂಸ್ಥೆಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಬಂಧಿತರ ವಿಚಾರಣೆ ಮತ್ತು ವಶಪಡಿಸಿಕೊಂಡಿರುವ ವಸ್ತುಗಳ ವಿಶ್ಲೇಷಣೆ ಬಳಿಕ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.