ಮನೆ ಸುದ್ದಿ ಜಾಲ ‘ಭಾವಾಂತರ’ಕ್ಕೆ ಹೊಂಬಾಳೆ ಫಿಲ್ಮ್ಸ್​ ಸಾಥ್ : ನಟನೆ ಜೊತೆಗೆ ನಿರ್ದೇಶನ

‘ಭಾವಾಂತರ’ಕ್ಕೆ ಹೊಂಬಾಳೆ ಫಿಲ್ಮ್ಸ್​ ಸಾಥ್ : ನಟನೆ ಜೊತೆಗೆ ನಿರ್ದೇಶನ

0

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡೋದು ಹೊಸತೇನೆಲ್ಲ. ವಿವಿಧ ಕ್ಷೇತ್ರಗಳ ಪರಿಣಿತರು ವಿವಿಧ ವಿಭಾಗಗಳಿಗೆ ಹೆಜ್ಜೆ ಇಡುವ ಮೂಲಕ ತಮ್ಮ ಬಹುಮುಖ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಇದೀಗ ವೀರ ಕನ್ನಡಿಗ, ಮ್ಯಾಜಿಕ್ ಅಜ್ಜಿ ಸೇರಿದಂತೆ 30ಕ್ಕೂ ಅಧಿಕ ಚಿತ್ರಗಳಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಶರ್ಮ ನಿರ್ದೇಶಕ್ಕಿಳಿದಿದ್ದಾರೆ. ಸಂಗೀತ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಸಿನಿಮಾ ಒಂದಕ್ಕೆ ಆ್ಯಕ್ಷನ್​ ಕಟ್​ ಹೇಳುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ನೂರಕ್ಕೂ ಅಧಿಕ ಧಾರಾವಾಹಿ ಹಾಗೂ ಟಿವಿ ಶೋಗಳಿಗೂ ಸಂಗೀತ ನೀಡಿರುವ ಕಾರ್ತಿಕ್ ಶರ್ಮ ಪ್ರಸ್ತುತ ಭಾವಾಂತರ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಇದು ನೈಜ ಘಟನೆ ಆಧರಿಸಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​ ಕಟ್ ಹೇಳಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯವನ್ನೂ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಇತ್ತೀಚಿಗೆ ಟೀಸರ್ ಬಿಡುಗಡೆಯಾಗಿದ್ದು, ಆಡಿಯೋ ಹಕ್ಕನ್ನು ಹೊಂಬಾಳೆ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿದೆ. ನಟಿಸಿ, ನಿರ್ದೇಶಿಸಿರುವ ಕಾರ್ತಿಕ್ ಶರ್ಮ ಮಾತನಾಡಿ, ಬಾಲನಟನಾಗಿ ಹಾಗೂ ಸಂಗೀತ ಸಂಯೋಜಕನಾಗಿ ಪರಿಚಿತನಾಗಿದ್ದ ನಾನು, ಭಾವಾಂತರ ಸಿನಿಮಾ ಮೂಲಕ ನಿರ್ದೇಶಕನಾಗಿದ್ದೇನೆ. ನನ್ನ ಆರಂಭದ ದಿನಗಳಿಂದಲೂ ತಾವು ನೀಡುತ್ತಿರುವ ಪ್ರೋತ್ಸಾಹ ಈಗಲೂ ಮುಂದುವರೆಯಲಿ. ಭಾವಾಂತರ ಒಂದು ನೈಜ ಘಟನೆ ಆಧಾರಿತ ಚಿತ್ರ. ನನಗೆ ತಿಳಿದ ಹಾಗೆ ದಕ್ಷಿಣ ಭಾರತದಲ್ಲೇ ಈ ರೀತಿಯ ಕಥೆ ಈವರೆಗೂ ಬಂದಿಲ್ಲ. ಅಂತಹ ಅಪರೂಪದ ಕಥಾಹಂದರ ಹೊಂದಿರುವ ಚಿತ್ರವಿದು. ಚಿತ್ರದಲ್ಲಿ ನಾನೇ ಸಂಗೀತ ಸಂಯೋಜಿಸಿರುವ ಐದು ಹಾಡುಗಳಿದ್ದು, ಹೆಸರಾಂತ ಹೊಂಬಾಳೆ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕು ಪಡೆದುಕೊಂಡಿದೆ. ಟೀಸರ್ ಕೂಡಾ ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ಪಡೆದುಕೊಂಡಿದೆ. ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಚಿತ್ರೀಕರಣ ನಡೆದಿದೆ.

ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ನನ್ನ ಜೊತೆಗೆ ತನ್ವಿ ರಾವ್ ಅವರು ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್, ಭಾನು ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಿಕ್ ಮೀಡಿಯಾ ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಾಗರ್ ಅತ್ದ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಸಂಕಲನವಿದೆ ಎಂದು ಕಾರ್ತಿಕ್ ಶರ್ಮ ಮಾಹಿತಿ ನೀಡಿದ್ದಾರೆ. ಈ ಚಿತ್ರ ಆದಷ್ಟು ಬೇಗ ಬಿಡುಗಡೆ ಆಗಲಿದೆ. ಅಧಿಕೃತ ರಿಲೀಸ್​ ಡೇಟ್​ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂತಹಂತವಾಗಿ ಕೊಡಲಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸಿನಿಮಾವೊಂದನ್ನು ನಿರ್ದೇಶಿಸಿ, ಡೈರೆಕ್ಷರ್​ ಆಗಿಯೂ ಯಶಸ್ಸು ಕಂಡಿದ್ದಾರೆ. ಸ್ಯಾಂಡಲ್​ವುಡ್​​ ಸೂಪರ್​​ ಸ್ಟಾರ್ಸ್ ಶಿವರಾಜ್​​ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಸ್ಕ್ರೀನ್​ ಶೇರ್ ಮಾಡಿರುವ ’45’ ಶೀರ್ಷಿಕೆಯ ಚಿತ್ರ ಕಳೆದ ವರ್ಷಾಂತ್ಯ ತೆರೆಕಂಡು ಯಶಸ್ವಿಯಾಗಿದೆ. ನಿರ್ದೇಶಕನಾಗಿಯೂ ಅರ್ಜುನ್ ಜನ್ಯ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದು, ಇದೀಗ ನಟ, ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ ಎಷ್ಟರ ಮಟ್ಟಿಗೆ ಗೆಲುವು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎನ್ನಬಹುದು.