ಮನೆ ಸ್ಥಳೀಯ ಮೊದಲ ಬಾರಿಗೆ ಮುಡಾ ಕಚೇರಿಗೆ ಭೇಟಿ ನೀಡಿದ ನಿವೃತ್ತ ನ್ಯಾ.ದೇಸಾಯಿ

ಮೊದಲ ಬಾರಿಗೆ ಮುಡಾ ಕಚೇರಿಗೆ ಭೇಟಿ ನೀಡಿದ ನಿವೃತ್ತ ನ್ಯಾ.ದೇಸಾಯಿ

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ(ಮುಡಾ) ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಆಯೋಗದ ಏಕ ಸದಸ್ಯ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರು ಇಂದು ಇದೇ ಮೊದಲ ಬಾರಿಗೆ ಮುಡಾ ಕಚೇರಿಗೆ ಭೇಟಿ ನೀಡಿದ್ದಾರೆ.

Join Our Whatsapp Group

ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭಾ ಕೊಠಡಿಯಲ್ಲಿ ಮಾತುಕತೆ ನಡೆಸಿದ ಅವರು, ಕಡತಗಳನ್ನು ಪರಿಶೀಲಿಸಿದರು.

ಸರ್ಕಾರದಿಂದ ನೇಮಕವಾದ ಬಳಿಕ ಪಿ.ಎನ್‌.ದೇಸಾಯಿ ಆಯೋಗ ಬೆಂಗಳೂರಿನಲ್ಲಿ ಕಚೇರಿ ತೆರೆದು, ಕೆಲವು ಮುಡಾ ದಾಖಲಾತಿಗಳ ನಕಲು ಪ್ರತಿಯನ್ನು ಬೆಂಗಳೂರಿಗೆ ತರಿಸಿಕೊಂಡಿತ್ತು. ಬಳಿಕ ಕೆಲವು ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆ ಕೈಗೊಂಡಿತ್ತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣಲ್ಲಿ ಲೋಕಾಯುಕ್ತ ಹಾಗೂ ಇಡಿಯಿಂದಲೂ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿಗೆ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮೂರು ತಿಂಗಳೊಳಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಸೂಚಿಸಿದೆ. ಅದರನ್ವಯ ಈಗಾಗಲೇ ಮೈಸೂರು ಲೋಕಾಯುಕ್ತ ಪ್ರಕರಣದ ಮೊದಲ ಆರೋಪಿ, ಸಿಎಂ ಸಿದ್ದರಾಮಯ್ಯ, 2ನೇ ಆರೋಪಿ ಪತ್ನಿ ಪಾರ್ವತಿ ಹಾಗೂ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಿದ ದೇವರಾಜ್‌ ಎಂಬವರನ್ನು ವಿಚಾರಣೆ ನಡೆಸಿದೆ. ಲೋಕಾಯುಕ್ತ ಕೋರ್ಟ್​ಗೆ ವರದಿ ನೀಡಲು ಸಿದ್ಧತೆ ನಡೆಸಿದೆ.

ಮತ್ತೊಂದೆಡೆ, ಮುಡಾ ಹಗರಣದಲ್ಲಿ ನಡೆದಿರುವ ಹಣಕಾಸು ಅಕ್ರಮ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ನೀಡಿರುವ ದೂರಿನನ್ವಯ ಇ.ಡಿ. ಈಗಾಗಲೇ ಮುಡಾದಲ್ಲಿ 38 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲಿಸಿದೆ. ಹಿಂದಿನ ಇಬ್ಬರು ಆಯುಕ್ತರು ಹಾಗೂ ಕೆಲವು ರಿಯಲ್‌ ಎಸ್ಟೇಟ್‌ ಬಿಲ್ಡರ್​ಗಳ ಕಚೇರಿ ಹಾಗೂ ಮನೆಯ ಮೇಲೆ ದಾಳಿ ಮಾಡಿದೆ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಹಲವರಿಗೆ ನೋಟಿಸ್‌ ನೀಡಿದೆ.