ಮಂಗಳೂರು: ಹಿರಿಯ ಪತ್ರಕರ್ತ, ಬರಹಗಾರ, ಚಿಂತಕ ವಿ.ಟಿ.ರಾಜಶೇಖರ್ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಶಿವಭಾಗ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ರಾಜಶೇಖರ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ರಾಜಶೇಖರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಖ್ಯಾತ ಪತ್ರಕರ್ತ, ಪ್ರಖರ ಚಿಂತಕ ಮತ್ತು ಹೋರಾಟಗಾರ ವಿ.ಟಿ.ರಾಜಶೇಖರ್ (93) ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪತ್ರಿಕಾ ವೃತ್ತಿಯನ್ನು ಒಬ್ಬ ಹೋರಾಟಗಾರನಾಗಿಯೇ ಮುನ್ನಡೆಸಿದ್ದ ರಾಜಶೇಖರ್, ಜಾತಿ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸದಾ ಸಿಡಿಯುತ್ತಿದ್ದವರು ಎಂದು ಸ್ಮರಿಸಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ನಂತರ ಅಲ್ಲಿಂದ ಹೊರಬಂದು 1981ರಲ್ಲಿ ದಲಿತ್ ವಾಯ್ಸ್ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಆ ದಿನಗಳಿಂದಲೇ ಪರಿಚಿತರಾಗಿದ್ದ ರಾಜಶೇಖರ್ ಅವರು ಒಬ್ಬ ಹಿರಿಯ ಹಿತೈಷಿಯಾಗಿ ನನಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ.