ಮನೆ ಅಪರಾಧ ಕ್ರೆಡಿಟ್ ಕಾರ್ಡ್‌ ಕಾಲ್‌ಸೆಂಟರ್ ಹೆಸರಿನಲ್ಲಿ 85 ಜನರಿಗೆ ವಂಚನೆ

ಕ್ರೆಡಿಟ್ ಕಾರ್ಡ್‌ ಕಾಲ್‌ಸೆಂಟರ್ ಹೆಸರಿನಲ್ಲಿ 85 ಜನರಿಗೆ ವಂಚನೆ

0

ಬೆಂಗಳೂರು: ಕ್ರೆಡಿಟ್ ಕಾರ್ಡ್ ಸಮಸ್ಯೆ ಇತ್ಯರ್ಥ ಪಡಿಸುವ ಸೋಗಿನಲ್ಲಿ ಕರೆ ಮಾಡುವ ಸೈಬರ್ ವಂಚಕರು ಕಳೆದ ಹದಿನೈದು ದಿನದಲ್ಲಿ ಬೆಂಗಳೂರು ನಗರದಲ್ಲಿ ಕ್ರೆಡಿಟ್ ಕಾರ್ಡ್ ವಿವರ ಪಡೆದು 85 ಮಂದಿಗೆ ವಂಚಿಸಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಈವರೆಗೂ ಒಟಿಪಿ ಪಡೆದು ವಂಚಿಸುತ್ತಿದ್ದ ಸೈಬರ್ ವಂಚಕರು, ಇದೀಗ ಹೊಸ ಹಾದಿ ಕಂಡು ಕೋಂಡಿದ್ದಾರೆ. ಕ್ರೆಡಿಟ್ ಕಾರ್ಡ್ ನ ಸಮಸ್ಯೆಗೆ ಸಂಬಂಧಿಸಿದಂತೆ ಕಾಲ್ ಸೆಂಟರ್‌ಗೆ ಕರೆ ಮಾಡಿ ದೂರು ಕೊಟ್ಟಿರುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ಕರೆ ಮಾಡುತ್ತಾರೆ.

ಕ್ರೆಡಿಟ್ ಕಾರ್ಡ್ ಸಮಸ್ಯೆ ಇತ್ಯರ್ಥ ಪಡಿಸುವ ಸೋಗಿನಲ್ಲಿ Any Desk ಆಪ್ ಮೂಲಕ ಮೊಬೈಲ್‌ ಅನ್ನು ರಿಮೂಟ್ ಮೂಲಕ ನಿರ್ವಹಣೆಗೆ ತೆಗೆದುಕೊಳ್ಳುತ್ತಾರೆ. ಈ ವೇಳೆ ಕ್ರೆಡಿಟ್ ಕಾರ್ಡ್ ನಲ್ಲಿರುವ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ನಾಮ ಹಾಕುತ್ತಿದ್ದಾರೆ.

ವಿಪರ್ಯಾಸವೆಂದರೆ ಕ್ರೆಡಿಟ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಕಾಲ್ ಸೆಂಟರ್ ಗೆ ಕರೆ ಮಾಡಿರುವರನ್ನೇ ಟಾರ್ಗೆಟ್ ಮಾಡಿ ದೋಖಾ ಮಾಡುತ್ತಿದ್ದಾರೆ. ಈ ಸೈಬರ್ ದೂರುಗಳಿಂದ ಕಂಗಾಲಾಗಿರುವ ಪೊಲೀಸರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ಸೈಬರ್ ವಂಚಕರ ಜಾಲ ಪತ್ತೆಗೆ ಮುಂದಾಗಿದ್ದಾರೆ.

ಉತ್ತರ ಭಾರತ ಮೂಲದ ವಂಚಕರು ಕಸ್ಟಮರ್ ಕೇರ್ ಸೋಗಿನಲ್ಲಿ ಕರೆ ಮಾಡಿ ಪರಿಚಯಿಸಿಕೊಳ್ಳುತ್ತಾರೆ. ಗ್ರಾಹಕನ ನಂಬಿಕೆ ಗಳಿಸುತ್ತಿದ್ದಾರೆ. ಆನಂತರ ಕ್ರೆಡಿಟ್ ಕಾರ್ಡ್ ವಿವರ ಪಡೆಯುತ್ತಾರೆ. ಅದಾದ ಬಳಿಕ ಕ್ರೆಡಿಟ್ ಕಾರ್ಡ್ ಹಣ ವರ್ಗಾವಣೆ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಇದೇ ರೀತಿ ಬೆಂಗಳೂರಿನಲ್ಲಿ ನೂರಾರು ಮಂದಿಗೆ ಮೋಸ ಮಾಡಿದ್ದು ಹದಿನೈದು ದಿನದಲ್ಲಿ 85 ವಂಚನೆ ಪ್ರಕರಣ ದಾಖಲಾಗಿದ್ದು, ಸೈಬರ್ ವಂಚಕರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಾಗೃತಿ ಒಂದೇ ಪರಿಹಾರ :
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆದಾರರು ಎಚ್ಚರಿಕೆಯಿಂದ ಕಾರ್ಡ್ ಬಳಸಬೇಕು. ಕಸ್ಟಮರ್ ಕೇರ್ ನಿಂದ ಕರೆ ಮಾಡಿದ್ರೂ ಕಾರ್ಡ್ ನ ಸಂಪೂರ್ಣ ವಿವರ ಕೊಡಲೇಬಾರದು. ಒಟಿಪಿ, ಪಾಸ್ ವರ್ಡ್ ಯಾರೂ ಕೇಳುವಂತಿಲ್ಲ. ಈ ಬಗ್ಗೆ ಜನರು ಜಾಗೃತಿ ವಹಸಬೇಕು. ಇನ್ನು ಗ್ರಾಹಕರಿಂದ 10 ಸಾವಿರ, 20 ಸಾವಿರ ವಂಚನೆ ಮಾಡುವ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಬೆಂಗಳೂರು ಪೊಲೀಸರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸೈಬರ್ ವಂಚನೆ ನಿಯಂತ್ರಿಸಲು ಪೊಲೀಸರು ತಾಂತ್ರಿಕವಾಗಿ ನಿಪುಣರಾಗಬೇಕು. ಸೈಬರ್ ಲಾ ನಲ್ಲಿ ನಿಪುಣತೆ ಸಾಧಿಸಬೇಕಾಗಿದೆ.