ಮನೆ ರಾಜಕೀಯ ರಾಜ್ಯಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿ ವಾಪಸ್ ಪ್ರಶ್ನೆಯೇ ಇಲ್ಲ – ಹೆಚ್.ಡಿ.ಕುಮಾರಸ್ವಾಮಿ

ರಾಜ್ಯಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿ ವಾಪಸ್ ಪ್ರಶ್ನೆಯೇ ಇಲ್ಲ – ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು(Bengaluru): ರಾಜ್ಯಸಭೆ ಚುನಾವಣಾ  ಕಣದಿಂದ ತಮ್ಮ ಪಕ್ಷದ  ಅಭ್ಯರ್ಥಿಯನ್ನು ಹಿಂದಕ್ಕೆ  ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಜೆಪಿ ನಗರದಲ್ಲಿ ಇಂದು ಮೊಮ್ಮಗನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಕಾಂಗ್ರೆಸ್ ನವರು ಹೇಳಿದಕ್ಕೆಲ್ಲಾ ಒಪ್ಪಿಕೊಳ್ಳಬೇಕಾ?. ನಾವು 32 ಮಂದಿ ಶಾಸಕರು ಇದ್ದೇವೆ. ಕಾಂಗ್ರೆಸ್ ನವರು 25 ಶಾಸಕರಿದ್ದಾರೆ. ಯಾರ ಬಳಿ ಹೆಚ್ಚು ಮತಗಳು ಇವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವರ ದಬ್ಬಾಳಿಕೆಗೆಲ್ಲಾ ನಾವು ಬಗ್ಗಲು ಆಗುತ್ತಾ? ಎಂದು ನೇರವಾಗಿ ಅವರು ಹೇಳಿದರು.

ನಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ಯಾಕೆ ಹಿಂದೆ ಸರಿಯುತ್ತಾರೆ? ಎಂದು ಪ್ರಶ್ನಿಸಿದ ಅವರು, ನಾವೇನು ಸಂಧಾನ ಮಾಡುತ್ತಿಲ್ಲ. ನನ್ನ ಬಳಿ ಯಾರು ಸಂಧಾನಕ್ಕೆ ಬಂದಿದ್ದಾರೆ ಅನ್ನೋದನ್ನು ಅವರು ಹೇಳಲಿ ಎಂದರು.

ನಾವು ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಇವರು ನಮ್ಮ ಜೊತೆ ಸಮಾಲೋಚನೆ ಮಾಡಿ ಅಭ್ಯರ್ಥಿ ಹಾಕಿದ್ದಾರಾ? ಬೆಂಬಲ ಕೊಡಿ ಅಂತಾ ನಮ್ಮ ಪಕ್ಷದ ಅಧ್ಯಕ್ಷರನ್ನು ಕೇಳಬಹುದಾಗಿತ್ತಲ್ಲವೇ? ಅವರು ಸಿ.ಎಂ.ಇಬ್ರಾಹಿಂ ಅವರಿಗೆ ಹಳೆಯ ಸ್ನೇಹಿತರು ಅಲ್ಲವೇ? ಒಂದು ಮಾತು ಅವರನ್ನು ಕೇಳಬಹುದಿತ್ತು ಎಂದು  ಹೇಳಿದರು.

ಅಂತ ಯಾವ ಪ್ರಯತ್ನವನ್ನು ಮಾಡದೇ ಈಗ ಅಭ್ಯರ್ಥಿಯನ್ನು ವಾಪಸ್ ತೆಗೆದುಕೊಳ್ಳಲಿ ಅಂತಾ ಹೇಳುವುದು  ಭಂಡತನ. ನಾವೇನು ಇವರ ಗುಲಾಮರಾ? ಎಂದು ಕಿಡಿಕಿದಿಯಾದ ಅವರು, ಕಾಂಗ್ರೆಸ್ ಗೆ ಹೋದ ಬಳಿಕ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಎಷ್ಟು ಬಾರಿ ಬೆಂಬಲ ಕೊಟ್ಟಿದ್ದಾರೆ ಎಂದು ಕೇಳಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ತೀವ್ರ ವಾಗ್ದಾಳಿ ನಡೆಸಿದರು.

ಇಬ್ರಾಹಿಂ ಕಾಟಾಚಾರದ ಅಧ್ಯಕ್ಷರಲ್ಲ:

ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಸಿದ್ದರಾಮಯ್ಯ ಅವರು ಕೇವಲವಾಗಿ ಮಾತನಾಡಿದ್ದಾರೆ. ಕಾಟಾಚಾರದ ಅಧ್ಯಕ್ಷರನ್ನು ಮಾಡಿದ್ದಾರೆಂದು ಕುಹಕವಾಡಿದ್ದಾರೆ. ಇದು ಅವರ ಸಣ್ಣತನ. ನಮ್ಮ ಅಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಕುಮಾರಸ್ವಾಮಿ ನೇರ ಮಾತುಗಳಲ್ಲಿ ತಾಕೀತು ಮಾಡಿದರು.

ನಾವು ಇಬ್ರಾಹಿಂ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ. ಅವರ ಹಿರಿತನ, ಅನುಭವದ ಬಗ್ಗೆ ನಮಗೆ ಅರಿವಿದೆ. ಇವರು (ಸಿದ್ದರಾಮಯ್ಯ) ಎಷ್ಟು ಜನ ಅಲ್ಪಸಂಖ್ಯಾತರ ಕುತ್ತಿಗೆ ಕೊಯ್ದಿಲ್ಲ ಹೇಳಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಇದಕ್ಕಿಂತ ಓಪನ್ ಆಫರ್ ಏನು ಕೊಡಲಿ?:

ಬಿಜೆಪಿಯನ್ನು ಸೋಲಿಸಲು ಎಲ್ಲದಕ್ಕೂ ಸಿದ್ದನಿದ್ದೇನೆ. ಕಾಂಗ್ರೆಸ್ ನಾಯಕರಿಗೆ ಇದಕ್ಕಿಂತ ಓಪನ್ ಆಫರ್ ಏನು ಕೊಡಲಿ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಯಾರಿಗಿದೆ ಇಲ್ಲಿ ಆತ್ಮಸಾಕ್ಷಿ? ನಾಳೆ ಮಧ್ಯಾಹ್ನದ ವೇಳೆಗೆ  ಒಂದು ಸ್ಪಷ್ಟತೆ ದೊರೆಯುತ್ತದೆ. ನಮ್ಮ ಕುಪೇಂದ್ರ ರೆಡ್ಡಿ ಅವರು ಎಲ್ಲಾ ಶಾಸಕರನ್ನು ಭೇಟಿ ಮಾಡಿದ್ದಾರೆ. 32 ಶಾಸಕರು ಒಟ್ಟಾಗಿ ಎಲ್ಲರೂ ಮತ ನೀಡುತ್ತಾರೆ. ನಮ್ಮ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ತೀರ್ಮಾನ ಮಾಡುತ್ತಾರೆ.‌ ಜಿ.ಟಿ.ದೇವೇಗೌಡ, ಗುಬ್ಬಿ ವಾಸು, ಶ್ರೀನಿವಾಸಗೌಡ, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರ ಜೊತೆಯೂ ರೆಡ್ಡಿ ಅವರು ಮಾತನಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ರಾಜ್ಯಸಭೆ ಅಭ್ಯರ್ಥಿ ಕುಪೇಂದ್ರ ರೆಡ್ಡಿ, ಶಾಸಕ ಅನ್ನದಾನಿ ಮುಂತಾದವರು ಹಾಜರಿದ್ದರು.