ಮನೆ ಸುದ್ದಿ ಜಾಲ ಮೈಸೂರಿನ ಹೆಸರಾಂತ ಸುತ್ತೂರು ಜಾತ್ರಾ ಮಹೋತ್ಸವ ರದ್ದು

ಮೈಸೂರಿನ ಹೆಸರಾಂತ ಸುತ್ತೂರು ಜಾತ್ರಾ ಮಹೋತ್ಸವ ರದ್ದು

0

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು ಸರ್ಕಾರದ ಮಾರ್ಗಸೂಚಿಯಂತೆ ರದ್ದುಗೊಳಿಸಲಾಗಿದೆ.
ಜಾತ್ರಾ ಮಹೋತ್ಸವವು ಜ.28 ಶುಕ್ರವಾರದಿಂದ ಫೆ. 2 ಬುಧವಾರದವರೆಗೆ ನೆರವೇರಬೇಕಾಗಿತ್ತು. ಆದರೆ ಕೋವಿಡ್-19ರ ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಸರ್ಕಾರ ರಾತ್ರಿ ವೇಳೆ ಹಾಗೂ ವಾರಾಂತ್ಯಗಳಲ್ಲಿ ಕರ್ಫ್ಯೂ ಘೋಷಿಸಿದೆ. ಸೋಂಕು ಮತ್ತಷ್ಟು ಉಲ್ಬಣಿಸಿದರೆ ಕಾನೂನಿನ ಕಟ್ಟುಪಾಡುಗಳು ಮತ್ತಷ್ಟು ಕಠಿಣಗೊಳ್ಳಲಿವೆ.
ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಾರಿಯ ಜಾತ್ರೆಯನ್ನು ಪೂರ್ಣವಾಗಿ ರದ್ದುಪಡಿಸಲಾಗಿದೆ.
ರಥೋತ್ಸವ, ತೆಪ್ಪೋತ್ಸವ, ಸಾಮೂಹಿಕ ವಿವಾಹ, ವಸ್ತುಪ್ರದರ್ಶನ, ಕೃಷಿಮೇಳ, ಕುಸ್ತಿ ಪಂದ್ಯಾವಳಿ, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂಗಡಿ ಮುಂಗಟ್ಟುಗಳು- ಇತ್ಯಾದಿ ಯಾವುವೂ ಇರುವುದಿಲ್ಲ. ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಸಾಂಕೇತಿಕವಾಗಿ ಒಂದೇ ದಿವಸಕ್ಕೆ ಸೀಮಿತಗೊಳಿಸಿ ಆಚರಿಸಲಾಗುತ್ತದೆ.
ಈ ಕಾರಣಗಳಿಂದಾಗಿ ಸೇವಾರ್ಥದಾರರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾರಿಗೂ ಶ್ರೀಕ್ಷೇತ್ರಕ್ಕೆ ಪ್ರವೇಶವಿರುವುದಿಲ್ಲ. ಸಾಂಪ್ರದಾಯಿಕವಾಗಿ- ಸಾಂಕೇತಿಕವಾಗಿ ಜನವರಿ 29ರಂದು ಸಂಜೆ ಹಾಗೂ 30ರಂದು ನಡೆಯುವ ಧಾರ್ಮಿಕ ಆಚರಣೆಗಳನ್ನು ಆನ್ಲೈನ್‌ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಹಿಂದಿನ ಲೇಖನಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ
ಮುಂದಿನ ಲೇಖನಮಗನನ್ನು ಕೊಂದಿದ್ದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ