ಮನೆ ಮನರಂಜನೆ ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್‌

ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್‌

0

ಮುಂಬೈ (Mumbai): 90 ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ್ದ ನಟಿ ಮಹಿಮಾ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ.

ಈ ವಿಷಯವನ್ನು ಬಾಲಿವುಡ್ ನಟ ಅನುಪಮ್ ಖೇರ್ ಅವರು ಬಹಿರಂಗಪಡಿಸಿದ್ದು, ಮಹಿಮಾ ಅವರು ನನ್ನ ರಿಯಲ್ ಹೀರೋ ಎಂದು ಕೊಂಡಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನುಪಮ್ ಖೇರ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಮಹಿಮಾ ಅವರು, ನನಗೆ ಅನೇಕ ನಿರ್ದೇಶಕರು ಸಿನಿಮಾ ಹಾಗೂ ವೆಬ್‌ ಶೋಗಳಲ್ಲಿ ಅಭಿನಯಿಸಲು ಕೇಳಿಕೊಂಡಿದ್ದರು. ಆದರೆ, ನನಗೆ ದುಃಖ ಉಮ್ಮಳಿಸುತ್ತಲೇ ಇತ್ತು. ಒಂದು ದಿನ ಅನುಪಮ್ ನನಗೆ ಸಿನಿಮಾ ವಿಷಯವಾಗಿ ಕರೆ ಮಾಡಿದ್ದಾಗ ನಾನು ನನಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಹೇಳಿದೆ. ಅಲ್ಲದೇ ನನಗೆ ತಲೆಯಲ್ಲಿ ಕೂದಲು ಇಲ್ಲದಿರುವುದರಿಂದ ನಟನೆ ಸಾಧ್ಯವಾ? ಎಂದು ಕೇಳಿಕೊಂಡೆ. ಅನುಪಮ್ ನೀಡಿರುವ ಧೈರ್ಯ ನನ್ನನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡಿತು ಎಂದಿದ್ದಾರೆ.

ಅನುಪಮ್‌ ಖೇರ್‌, ನಾನು ನನ್ನ 525 ನೇ ಚಿತ್ರ ‘ದಿ ಸಿಗ್ನೇಚರ್ʼ ಚಿತ್ರಕ್ಕೆ ಮಹಿಮಾ ಚೌದರಿ ಅವರನ್ನು ಮಾತನಾಡಿಸಿದಾಗ, ಅವರು ತಮಗೆ ಸ್ತನ ಕ್ಯಾನ್ಸರ್ ಇರುವುದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರು ಎಷ್ಟು ಧೈರ್ಯವಂತೆ ಎಂದು ನನಗೆ ಆಶ್ಚರ್ಯವಾಯಿತು. ಮಹಿಮಾ ಅವರು ಈ ವಿಷಯದಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯ ಚಿಲುಮೆ. ಮಹಿಮಾ ನೀವು ನಮ್ಮ ರಿಯಲ್ ಹೀರೋ. ನೀವು ಬೇಗ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

48 ವಯಸ್ಸಿನ ಮಹಿಮಾ ಅವರು 90 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ್ದರು. ಇತ್ತೀಚೆಗೆ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2006 ರಲ್ಲಿ ಬಾಬಿ ಮುಖರ್ಜಿ ಅವರನ್ನು ವರಿಸಿದ್ದರು. 2013 ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಅವರಿಗೆ ಆರ್ಯಾನಾ ಚೌಧರಿ ಎಂಬ ಮಗಳಿದ್ದಾಳೆ.

ಅನುಪಮ್ ಖೇರ್ ಅವರ ವಿಡಿಯೋ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದು, ಮಹಿಮಾ ಚೌಧರಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.