ಮನೆ ಸುದ್ದಿ ಜಾಲ ರುಕ್ಮಿಣಿ ವಸಂತ್ ಡೀಪ್‌ಫೇಕ್ ಅಶ್ಲೀಲ ಫೋಟೋ ಪ್ರಕರಣ; 29 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ...

ರುಕ್ಮಿಣಿ ವಸಂತ್ ಡೀಪ್‌ಫೇಕ್ ಅಶ್ಲೀಲ ಫೋಟೋ ಪ್ರಕರಣ; 29 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಕ್ರಮ

0

ಕನ್ನಡ ನಟಿ ರುಕ್ಮಿಣಿ ವಸಂತ್ ಅವರ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು AI ತಂತ್ರಜ್ಞಾನ ಬಳಸಿ ಮಾರ್ಫಿಂಗ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಟೆಕ್ನಾಲಜಿಯನ್ನು ಸರಿಯಾಗಿ ಬಳಸಿ ದುರುಪಯೋಗ ಮಾಡಬಾರದು ಎಂದು ಸೈಬರ್ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಖ್ಯಾತ ನಟಿಯರ ಫೋಟೋಗಳನ್ನು ಡೀಪ್‌ಫೇಕ್ ಮೂಲಕ ಮಾರ್ಫಿಂಗ್ ಮಾಡಿ ಹರಡುವ ಘಟನೆಗಳು ಮುಂದುವರಿದಿವೆ.

ಈ ಹಿಂದೆ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ಫೋಟೋ ವೈರಲ್ ಆಗಿದ್ದರೆ, ನಂತರ ನಟಿ ರಮ್ಯಾ ಅವರ ವಿರುದ್ಧವೂ ಅಶ್ಲೀಲ ಕಂಟೆಂಟ್ ಹರಡಲಾಗಿತ್ತು. ಇದೀಗ ರುಕ್ಮಿಣಿ ವಸಂತ್ ಅವರ ಬಿಕಿನಿ ಮತ್ತು ಸ್ವಿಮ್ಮಿಂಗ್ ಪೂಲ್ ಸಂಬಂಧಿತ ನಕಲಿ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ನಟಿ ಈ ಕುರಿತು ತಕ್ಷಣವೇ ಸ್ಪಷ್ಟನೆ ನೀಡಿದ್ದು, ಹರಡುತ್ತಿರುವ ಎಲ್ಲಾ ಫೋಟೋಗಳು ಸಂಪೂರ್ಣವಾಗಿ ನಕಲಿ ಎಂದು ಹೇಳಿದ್ದಾರೆ. ಜೊತೆಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ 9 ಇನ್‌ಸ್ಟಾಗ್ರಾಂ, 14 ಎಕ್ಸ್ (Twitter) ಮತ್ತು 6 ಫೇಸ್‌ಬುಕ್ ಖಾತೆಗಳು ಸೇರಿವೆ ಎಂದು ತಿಳಿದುಬಂದಿದೆ.

ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್ಎಸ್ 75(3), 79, 336, 356, 351, 352, 294 ಅಡಿಯಲ್ಲಿ ಪ್ರಕರಣ ದಾಖಲಿಸಿ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕುರಿತು ನಟಿ ರುಕ್ಮಿಣಿ ವಸಂತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ದೂರು ನೀಡಲಾಗಿದೆ ಮತ್ತು ಕಾನೂನು ಕ್ರಮ ಆರಂಭವಾಗಿದೆ ಎಂದು ತಿಳಿಸಿದ್ದಾರೆ.