ಮನೆ ರಾಜ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ ಹಿನ್ನಲೆ ವಿಜಯನಗರದಲ್ಲಿ ಇಂದು ಸಾಧನಾ ಸಮಾವೇಶ

ರಾಜ್ಯ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ ಹಿನ್ನಲೆ ವಿಜಯನಗರದಲ್ಲಿ ಇಂದು ಸಾಧನಾ ಸಮಾವೇಶ

0

ವಿಜಯನಗರ : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆ ಸರಕಾರದ ಸಾಧನೆಗಳನ್ನು ಜನರ ಮುಂದೆ ಮಂಡಿಸಲು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಭವ್ಯವಾದ “ಸಾಧನಾ ಸಮಾವೇಶ”ವನ್ನು ಇಂದು ಆಯೋಜಿಸಲಾಗಿದೆ.

ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ  ಸಮಾವೇಶಕ್ಕೆ ಕ್ರೀಡಾಂಗಣದಲ್ಲಿ 300 ಜನ ಜನಪ್ರತಿನಿಧಿಗಳು ಕೂರಲು ಬೃಹತ್ ವೇದಿಕೆ ಹಾಕಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಸೇರಿದಂತೆ ವಿವಿಧ ಮಟ್ಟದ ಕಾಂಗ್ರೆಸ್ ನಾಯಕರ ಉಪಸ್ಥಿತಿಯನ್ನು ನಿರೀಕ್ಷಿಸಲಾಗಿದೆ. ಸಮಾವೇಶದಲ್ಲಿ ಸುಮಾರು 3 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದಿಂದ 3,700 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಇಂದು ನಡೆಯಲಿರುವ ಸರ್ಕಾರದ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ನೂರಾರು ವರ್ಷಗಳಿಂದ ಹಕ್ಕುಪತ್ರಗಳಿಂದ ವಂಚನೆಗೆ ಒಳಗಾದವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಸರ್ಕಾರದ ಆಸ್ತಿಯನ್ನು ನೇರವಾಗಿ ತಹಸೀಲ್ದಾರರು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿ ಫಲಾನುಭವಿಗಳಿಗೆ ನೀಡಲಿದ್ದಾರೆ. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗುತ್ತದೆ. ಜನ ನಮಗೆ ಆದೇಶ ಮಾಡಿ ಅವಕಾಶ ನೀಡಿದ್ದಾರೆ. ನಾವು ಅವರ ಋಣ ತೀರಿಸಬೇಕಿದೆ ಎಂದು ಡಿಸಿಎಂ ಡಿಕೆಶಿ ಹೇಳಿದರು.

200 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಸಮಾವೇಶ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಇಲ್ಲಿನ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.