ದಿಸ್ಪುರ್ : ವಾಮಾಚಾರ (ಮಾಟಮಂತ್ರ) ಮಾಡುತ್ತಿದ್ದಾರೆ ಎಂದು ಶಂಕಿಸಿ ಮಹಿಳೆಯೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಿದ ಘೋರ ಅಪರಾಧದಲ್ಲಿ 23 ಮಂದಿಗೆ ಆಸ್ಸಾಂ ರಾಜ್ಯದ ಚರೈಡಿಯೋ ಜಿಲ್ಲೆಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 13 ವರ್ಷಗಳ ಹಿಂದೆ ನಡೆದ ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈಗ ತೀರ್ಪು ಪ್ರಕಟಿಸಿದ್ದು, ನ್ಯಾಯಮೂರ್ತಿ ಅಬುಬಕ್ಕರ್ ಸಿದ್ದೀಕ್ ಅವರು ಈ ಗಂಭೀರ ಶಿಕ್ಷೆ ಘೋಷಿಸಿದ್ದಾರೆ.
2012ರಲ್ಲಿ ಚರೈಡಿಯೋ ಜಿಲ್ಲೆಯ ಜಲ್ಹಾ ಗ್ರಾಮದಲ್ಲಿ ಈ ದುರಂತ ಸಂಭವಿಸಿತು. ಸ್ಥಳೀಯರು ಮಹಿಳೆಯೊಬ್ಬರು ಮಾಟ ಮಂತ್ರ ಮಾಡುತ್ತಿದ್ದಾರೆ ಎಂಬ ಶಂಕೆಯೊಂದಿಗೆ ಗುಂಪಾಗಿ ಆಕೆಯ ಮೇಲೆ ದಾಳಿ ಮಾಡಿದರು. ಆಕೆಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿ, ಬಳಿಕ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಹಾಕಿದನು. ಈ ಹೃದಯವಿದ್ರಾವಕ ಘಟನೆ ಆ ಸಮಯದಲ್ಲಿ ಸ್ಥಳೀಯರು ಮತ್ತು ಮಾನವ ಹಕ್ಕು ಸಂಘಟನೆಗಳಲ್ಲಿ ಆಕ್ರೋಶ ಮೂಡಿಸಿತ್ತು.
ಘಟನೆಯ ನಂತರ 13 ವರ್ಷಗಳ ತನಿಖೆ ಹಾಗೂ ವಿಚಾರಣೆಯ ನಂತರ, ಚರೈಡಿಯೋ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 12 ಪುರುಷರು ಮತ್ತು 11 ಮಹಿಳೆಯರು ಈ ಅಪರಾಧದಲ್ಲಿ ಭಾಗವಹಿಸಿದ್ದುದನ್ನು ಸಾಬೀತುಪಡಿಸಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ ತಲಾ ₹5,000 ದಂಡ ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ₹8 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿದೆ.
ವಿದ್ಯೆ, ಪ್ರಜ್ಞೆ, ವೈಜ್ಞಾನಿಕ ಚಿಂತನೆಗಳು ಮಾತ್ರ ಇಂತಹ ದುರಂತಗಳಿಗೆ ಶಾಶ್ವತ ಪರಿಹಾರವಾಗಬಹುದು.