ಮನೆ ರಾಜ್ಯ ರಾಜ್ಯದಲ್ಲಿ ಅಕ್ರಮ ವಲಸಿಗರ ಜನಗಣತಿ ಆರಂಭ : ಡಾ. ಜಿ. ಪರಮೇಶ್ವರ್

ರಾಜ್ಯದಲ್ಲಿ ಅಕ್ರಮ ವಲಸಿಗರ ಜನಗಣತಿ ಆರಂಭ : ಡಾ. ಜಿ. ಪರಮೇಶ್ವರ್

0

ಬೆಂಗಳೂರು: ಕರ್ನಾಟಕ ರಾಜ್ಯದ ಹಲವೆಡೆ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರು ಸೇರಿದಂತೆ ವಿದೇಶಿ ಪ್ರಜೆಗಳ ವಿರುದ್ಧ ಗೃಹ ಇಲಾಖೆ ಸಕ್ರಿಯವಾಗಿದೆ. ಈ ಹಿನ್ನೆಲೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಅಕ್ರಮ ವಲಸಿಗರ ಗಣತಿ ನಡೆಸಿ ಶೀಘ್ರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್ ಅವರು, “ರಾಜ್ಯದಲ್ಲಿ ಬಾಂಗ್ಲಾ ಸೇರಿದಂತೆ ಇನ್ನೂ ಕೆಲ ರಾಷ್ಟ್ರಗಳಿಂದ ಆಗಮಿಸಿದ ವಲಸಿಗರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಹತ್ವದ ಮಾಹಿತಿಗಳಿವೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಪರಿಶೀಲನೆ ಪ್ರಾರಂಭವಾಗಿದೆ” ಎಂದು ತಿಳಿಸಿದರು.

ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಬಾಂಗ್ಲಾದೇಶದಿಂದ ಬಂದ ವಲಸಿಗರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಶಂಕಿತ ಮಾಹಿತಿ ಬಂದಿದ್ದು, ಈ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಲಾಗುತ್ತಿದೆ.

ಬೆಂಗಳೂರು ನಗರ ಹಾಗೂ ಅದರ ಹೊರವಲಯದ ಆನೇಕಲ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಬಾಂಗ್ಲನ್ನರು ಹಾಗೂ ಇನ್ನಷ್ಟು ದೇಶದ ವಲಸಿಗರು ನೆಲೆಸಿರುವ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯಿದೆ. ಈ ಹಿಂದೆ ಸುಮಾರು 200 ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲಾಗಿದ್ದು, ಇಂದಿಗೂ ಹಲವರು ಅಕ್ರಮವಾಗಿ  ಇಲ್ಲಿಯೇ ಉಳಿದಿದ್ದಾರೆ.

“ಅಕ್ರಮ ವಲಸಿಗರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಬಾಧಕರಾಗಬಾರದು. ಯಾವುದೇ ಕಾರಣಕ್ಕೂ ಅಕ್ರಮ ನೆಲೆಗೊಳ್ಳಲು ಅವಕಾಶ ಇಲ್ಲ. ಸದ್ಯದಲ್ಲಿಯೇ ಜಿಲ್ಲಾವಾರು ವರದಿ ಪಡೆದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಪೊಲೀಸ್ ಇಲಾಖೆ ಈ ಕುರಿತು ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಬೇಕೆಂಬ ಸೂಚನೆ ನೀಡಲಾಗಿದೆ. ಒಟ್ಟು ಎಷ್ಟು ವಲಸಿಗರು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ? ಯಾವ್ಯಾವ ಜಿಲ್ಲೆಗಳಲ್ಲಿ ಹೆಚ್ಚು? ಅವರ ಪಾಸ್‌ಪೋರ್ಟ್/ವೀಸಾ ಮಾನ್ಯತೆ ಹೇಗಿದೆ? ಇತ್ಯಾದಿ ಮಾಹಿತಿಗಳಿಗಾಗಿ ಸಮಗ್ರ ಪರಿಶೀಲನೆ ನಡೆಯಲಿದೆ.