ರಾಮನಗರ : ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಪ್ರವೇಶದ ಬೆನ್ನಲ್ಲೇ ಬಿಗ್ ಬಾಸ್‌ಗೆ ಇಂದೇ ಬಿಗ್ ರಿಲೀಫ್ ಸಿಗುವ ಸಾಧ್ಯತೆಯಿದೆ. ಈ ವೇಳೆ ಕೋರ್ಟ್ ಅಫಿಡವಿಟ್ ಸಲ್ಲಿಕೆ ಸೇರಿದಂತೆ ಅಗತ್ಯ ದಾಖಲಾತಿಯನ್ನು ಜಿಲ್ಲಾಧಿಕಾರಿ ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುವ ಜಾಲಿವುಡ್ ಸ್ಟುಡಿಯೋದ ಅಧಿಕಾರಿಗಳು ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಪ್ಪುಗಳನ್ನು ಸರಿಪಡಿಸಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.
ಅಗತ್ಯ ದಾಖಲೆ ಸಲ್ಲಿಕೆಗೆ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿ ಅನುಮತಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಕೊಟ್ಟಿರುವ ಗಡುವಿನಲ್ಲಿ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರೆ ಇಂದು ಮಧ್ಯಾಹ್ನವೇ ಜಾಲಿವುಡ್ ಸ್ಟುಡಿಯೋ ತೆರೆಯಲಿದೆ.
ಇಂದು ಮಧ್ಯಾಹ್ನ ಹೈಕೋರ್ಟ್‌ನಲ್ಲಿ ಜಾಲಿವುಡ್ ಸ್ಟುಡಿಯೋ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬರಲಿದೆ. ಹೀಗಾಗಿ ಅಲ್ಲಿ ಏನಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಒಂದು ವೇಳೆ ಇಂದೇ ಶೋ ಮತ್ತೆ ನಡೆಸಲು ಅನುಮತಿ ನೀಡಿದರೆ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್ ಮನೆಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.















