ಮನೆ ರಾಷ್ಟ್ರೀಯ ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಬಂಧನ

ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಬಂಧನ

0

ಚೆನ್ನೈ : ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಪ್ ತಯಾರಿಕ ಕಂಪನಿಯ ಮಾಲೀಕನನ್ನು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.

ಸಿರಪ್ ಕುಡಿದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಬಳಿಕ ಕೋಲ್ಡ್ರಿಫ್ ಸಿರಪ್ ಅನ್ನು ನಿಷೇಧಿಸಲಾಯಿತು. ಈ ಬೆನ್ನಲ್ಲೇ ಸಿರಪ್ ತಯಾರಿಸುತ್ತಿದ್ದ ಸ್ರೆಸನ್ ಫಾರ್ಮಾ ಕಂಪನಿಯ ಮಾಲೀಕ ರಂಗನಾಥನ್ ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

ಅಂತಿಮವಾಗಿ ಬುಧವಾರ ತಡರಾತ್ರಿ ಚೆನ್ನೈನಲ್ಲಿ ರಂಗನಾಥನ್‌ನನ್ನು ಬಂಧಿಸಲಾಗಿದೆ. ಸಿರಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ರಾಸಾಯನಿಕ ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾದ ಬಳಿಕ ಮಾಲೀಕನನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ರಂಗನಾಥನ್‌ನನ್ನು ಚೆನ್ನೈನಿಂದ ಛಿಂದ್ವಾರಕ್ಕೆ ಪೊಲೀಸರು ಕರೆ ತರುತ್ತಿದ್ದು, ನಂತರ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಈ ಹಿಂದೆ ಸ್ರೆಸನ್ ಫಾರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮಧ್ಯಪ್ರದೇಶವಲ್ಲದೆ ರಾಜಸ್ಥಾನದಲ್ಲೂ ಈ ಸಿರಪ್ ಸೇವಿಸಿದ ನಂತರ ಮಕ್ಕಳು ಸಾವನ್ನಪ್ಪಿರುವ ವರದಿಗಳಿವೆ. ಕೋಲ್ಡ್ರಿಫ್ ಹೆಸರಿನ ಈ ಸಿರಪ್ ಸೇವಿಸಿದ ಮಕ್ಕಳಲ್ಲಿ ಕಿಡ್ನಿ ಸೋಂಕು ಕಾಣಿಸಿಕೊಂಡು, ಹೆಚ್ಚಿನ ಸಂಖ್ಯೆಯ ಮಕ್ಕಳು ಸಾವನ್ನಪ್ಪಿದ್ದರು.

ತಪಾಸಣೆ ವೇಳೆ, ಫಾರ್ಮಾದ ಕಾರ್ಖಾನೆಯಲ್ಲಿ ಯಾವುದೇ ದಾಖಲೆಗಳಿಲ್ಲದ ಡಿಇಜಿ ಕಂಟೇನರ್‌ಗಳು ಪತ್ತೆಯಾಗಿದ್ದವು. ನಿಯಮಗಳ ಪ್ರಕಾರ ಕೇವಲ ಶೇ.0.1ರಷ್ಟು ಮಾತ್ರ ಡಿಇಜಿ ಬಳಸಲು ಅನುಮತಿ ಇದ್ದರೂ, ಈ ಕಂಪನಿಯು ಶೇ.46-48ರಷ್ಟು ಈ ವಿಷಕಾರಿ ರಾಸಾಯನಿಕವನ್ನು ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಬಳಸುತ್ತಿತ್ತು ಎಂಬ ಆಘಾತಕಾರಿ ಮಾಹಿತಿಯು ತನಿಖೆಯು ಬಹಿರಂಗವಾಗಿದೆ. ಇದನ್ನೂ

ಇಷ್ಟಲ್ಲದೆ, ಕಂಪನಿಯು ಉತ್ತಮ ಉತ್ಪಾದನಾ ಪದ್ಧತಿಗಳ (ಜಿಎಂಪಿ) ಪ್ರಮಾಣಪತ್ರವನ್ನು ಸಹ ಹೊಂದಿರಲಿಲ್ಲ. ಆದರೂ, ಜೆನೆರಿಕ್ ಔಷಧಿಗಳನ್ನು ತಯಾರಿಸಿ ಮಾರಾಟವನ್ನು ಮಾಡುತ್ತಿತ್ತು. ತಮಿಳುನಾಡಿನ ಕಾಂಚೀಪುರಂನ ಕಾರ್ಖಾನೆಯಲ್ಲಿ ಈ ಲೋಪಗಳು ಪತ್ತೆಯಾದ ನಂತರ, ರಾಜ್ಯ ಔಷಧಿ ನಿಯಂತ್ರಣ ಪ್ರಾಧಿಕಾರವು ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಿ, ಎಲ್ಲಾ ದಾಸ್ತಾನುಗಳನ್ನು ವಶಕ್ಕೆ ಪಡೆದಿತ್ತು. ಕಂಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಪರವಾನಗಿಯನ್ನು ಅಮಾನತುಗೊಳಿಸಿತ್ತು. ಈ ಘಟನೆಯ ನಂತರ, ಕನಿಷ್ಠ ಒಂಬತ್ತು ರಾಜ್ಯಗಳು ಈ ಸಿರಪ್ ಅನ್ನು ನಿಷೇಧಿಸಿವೆ.