ಮನೆ ಅಂತಾರಾಷ್ಟ್ರೀಯ ಗಾಜಾ ಯುದ್ಧ ಅಂತ್ಯ – ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಗಾಜಾ ಯುದ್ಧ ಅಂತ್ಯ – ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

0

ಟೆಲ್‌ಅವಿವ್ : ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಬೆನ್ನಲ್ಲೇ ಮೊದಲ ಹಂತವಾಗಿ ಇಸ್ರೇಲ್‌ನ ಏಳು ಮಂದಿ ಒತ್ತೆಯಾಳುಗಳನ್ನು ಹಮಾಸ ಬಿಡುಗಡೆ ಮಾಡಿದೆ.

ಇಸ್ರೇಲ್-ಹಮಾಸ್ ಕದನ ವಿರಾಮದ ಭಾಗವಾಗಿ ಮೊದಲ ಹಂತದಲ್ಲಿ 7 ಒತ್ತೆಯಾಳುಗಳನ್ನು ಹಮಾಸ್ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿದೆ. ಆದರೆ ಅವರ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ. ಜೊತೆಗೆ ಇಸ್ರೇಲ್ ವಶದಲ್ಲಿರುವ 1,900ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಕೈದಿಗಳಿಗೆ ಬದಲಾಗಿ 20 ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಹಮಾಸ್ ಹೇಳಿದೆ.

ಅದರಂತೆ 20 ಮಂದಿ ಪೈಕಿ 7 ಒತ್ತೆಯಾಳುಗಳನ್ನ ಬಿಡುಗಡೆಗೊಳಿಸಲಾಗಿದ್ದು, ಹಮಾಸ್ ಬಿಡುಗಡೆಗೊಳಿಸಿರುವ ಒತ್ತೆಯಾಳುಗಳು ಸದ್ಯ ರೆಡ್‌ಕ್ರಾಸ್ ನಿಯಂತ್ರಣದಲ್ಲಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಬಹಿರಂಗಪಡಿಸಿ, ಒತ್ತೆಯಾಳುಗಳ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಯುದ್ಧ ಅಂತ್ಯಗೊಂಡು, ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮುನ್ನ ಟ್ರಂಪ್ ಪಶ್ಚಿಮ ಏಷ್ಯಾಕ್ಕೆ ತೆರಳಿದ್ದಾರೆ. ಇದಕ್ಕೂ ಮುನ್ನ ಏರ್‌ಫೋರ್ಸ್ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಎಂದು ತಿಳಿಸಿದ್ದರು.

ಇದೊಂದು ವಿಶೇಷ ಕಾರ್ಯಕ್ರಮ, ಸಹಜವಾಗಿ ಒಂದು ಕಡೆ ಸಂತೋಷ ಇದ್ರೆ, ಮತ್ತೊಂದು ಕಡೆ ದುಃಖ ಇದೆ. ಆದ್ರೆ ಎಲ್ಲರೂ ಅಚ್ಚರಿಯಾಗಿರುವುದು, ರೋಮಾಂಚನಗೊಂಡಿರುವುದು ಇದೇ ಮೊದಲು. ಆದ್ರೆ ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ. ಇನ್ಮುಂದೆ ನಾವು ಹಿಂದೆಂದೂ ಕಾಣದ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ. ಇದರ ಬಳಿಕ ನಾವು ಈಜಿಪ್ಟ್ಗೆ ಹೋಗ್ತಿದ್ದೀವಿ. ಶಕ್ತಿಶಾಲಿ ಮತ್ತು ದೊಡ್ಡ ದೇಶಗಳ ನಾಯಕರನ್ನು ಹಾಗೂ ಅತ್ಯಂತ ಶ್ರೀಮಂತ ದೇಶಗಳನ್ನ ಭೇಟಿಯಾಗುತ್ತೇವೆ. ಅವರೆಲ್ಲರೂ ಈ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು.