ಮೈಸೂರು : ಮೈಸೂರು ಜಿಲ್ಲೆಯ 7 ಗ್ರಾಮಗಳು ಮಾದರಿ ಸೌರ ಗ್ರಾಮ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿವೆ. 1 ಕೋಟಿ ರೂಪಾಯಿ ಬಹುಮಾನಕ್ಕಾಗಿ ಗ್ರಾಮಗಳು ಪರಸ್ಪರ ಪೈಪೋಟಿಗೆ ಇಳಿದಿವೆ. ಸೋಲಾರ್ ಲೈಟ್, ಸೋಲಾರ್ ಪಂಪ್‌ಗಳ ಅಳವಡಿಕೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದು, ಇನ್ನೆರಡು ತಿಂಗಳಲ್ಲಿ ವಿಜೇತ ಗ್ರಾಮ ಘೋಷಣೆಯಾಗಲಿದೆ. ಇದೇ ವೇಳೆ ಸೌರ ಶಕ್ತಿ ಅಳವಡಿಸಿಕೊಂಡರೆ, ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗುತ್ತೇವೆ ಎಂಬ ಆತಂಕ ಗ್ರಾಮಸ್ಥರಲ್ಲಿದೆ.
ಮಾದರಿ ಸೌರ ಗ್ರಾಮವಾಗಿ ಹೊರ ಹೊಮ್ಮಲು ಮೈಸೂರು ಜಿಲ್ಲೆಯ ಏಳು ಗ್ರಾಮಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಸೋಲಾರ್ ಲೈಟ್, ಸೋಲಾರ್ ಪಂಪ್ ಹೀಗೆ ಗ್ರಾಮದ ಪ್ರತಿ ಮನೆಯ ಕೃಷಿ ಚಟುವಟಿಕೆಗಳಿಗೆ ಸೌರ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ದುಡಿಸಿಕೊಳ್ಳಲು ಸ್ಥಳೀಯ ಗ್ರಾಮಾಡಳಿತಗಳು ಶ್ರಮಿಸುತ್ತಿವೆ.
ಸ್ಪರ್ಧೆಯಲ್ಲಿ ಗೆದ್ದರೆ ಒಂದು ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಹಾಗಾಗಿ ಸ್ಥಳೀಯ ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಳೆದ ನಾಲ್ಕು ತಿಂಗಳಿನಿಂದ ಹರಸಾಹಸ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಯಾವ ಗ್ರಾಮಕ್ಕೆ ಕೋಟಿ ರೂಪಾಯಿ ಸಿಗಲಿದೆ ಎಂಬುದು ಘೋಷಣೆಯಾಗಲಿದೆ.
ಮಾದರಿ ಸೌರ ಗ್ರಾಮ ಯೋಜನೆಯಡಿ ಈ ಸ್ಪರ್ಧೆ ನಡೆಯುತ್ತಿದ್ದು, ಮೈಸೂರು ಜಿಲ್ಲೆಯಲ್ಲಿನ ಏಳು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಏಳು ಗ್ರಾಮಗಳಲ್ಲಿ ಉತ್ತಮವಾಗಿ ಸೌರ ಶಕ್ತಿಯನ್ನು ಬಳಕೆ ಮಾಡಿಕೊಳ್ಳುವ ಗ್ರಾಮಕ್ಕೆ ಕೋಟಿ ರೂಪಾಯಿ ಪ್ರೋತ್ಸಾಹ ಧನವಾಗಿ ಲಭಿಸಲಿದೆ ಎಂದು ಸೆಸ್ಕ್‌ನ ಅಧೀಕ್ಷಕ ಎಂಜಿನಿಯರ್ ಸುನೀಲ್ ಎನ್ನುತ್ತಾರೆ.
ಇತ್ತೀಚೆಗೆ ನಡೆದ ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯಲ್ಲಿ, ಮೈಸೂರು ಜಿಲ್ಲೆಯ ನಾನಾ ತಾಲೂಕುಗಳಿಂದ ಏಳು ಗ್ರಾಮಗಳನ್ನು ಈ ಮಾದರಿ ಸೌರ ಗ್ರಾಮ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಗ್ರಾಮದ ಜನರಲ್ಲಿ ಸೌರ ಶಕ್ತಿ ಬಳಕೆ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳು ಮಾಡಿದ್ದಾರೆ. ಗ್ರಾಮದ ಬೀದಿಗಳಿಗೆ ಸೋಲಾರ್ ಲೈಟ್‌ಗಳನ್ನು ಅಳವಡಿಸುವ ಕಾರ್ಯದಲ್ಲಿ ಇವರೆಲ್ಲ ನಿರತರಾಗಿದ್ದಾರೆ.
ಏಳು ಗ್ರಾಮಗಳಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳಾಗಿರುವ ಜನರು ತಮ್ಮ ಮನೆಗಳಲ್ಲಿ ಸೋಲಾರ್ ಲೈಟ್‌ಗಳನ್ನು ಅಳವಡಿಸಿಕೊಳ್ಳಲು ನಿರಾಸಕ್ತಿ ವಹಿಸುತ್ತಿರುವುದೇ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೋಲಾರ್ ಪ್ಯಾನಲ್ ಅಳವಡಿಸಿಕೊಂಡರೆ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.















