ಮನೆ ರಾಜ್ಯ ಸುಪ್ರೀಂ ಸಮಿತಿಯಿಂದ ಗಡಿ ಒತ್ತುವರಿ ವರದಿ ಸಲ್ಲಿಕೆ – ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ..!

ಸುಪ್ರೀಂ ಸಮಿತಿಯಿಂದ ಗಡಿ ಒತ್ತುವರಿ ವರದಿ ಸಲ್ಲಿಕೆ – ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ..!

0

ಬಳ್ಳಾರಿ : ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಲೂಟಿ ಸಂಕಷ್ಟ ಎದುರಾಗಿದ್ದು, ಆಂಧ್ರದ ಅನುಮತಿ ಬಳಸಿ ರಾಜ್ಯದ ಗಡಿ ಒತ್ತುವರಿ ಮಾಡಿದ್ದ, ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಸುದಾಂಶು ದುಲಿಯಾ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಬಳ್ಳಾರಿಗೆ ತಿಂಗಳ ಹಿಂದೆ ಸರ್ವೇಗೆ ಬಂದಿದ್ದ ನಿವೃತ್ತ ನ್ಯಾ. ಸುದಾಂಶು ದುಲಿಯಾ ನೇತೃತ್ವದ ಸಮಿತಿಯಿಂದ ಗಡಿ ಒತ್ತುವರಿ ಬಗ್ಗೆ ವರದಿ ಸಲ್ಲಿಕೆ ಮಾಡಲಾಗಿದೆ.

ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಡ್ರೋಣ್‌ ಮೂಲಕ ನಡೆದಿದ್ದ ಸರ್ವೇಯಲ್ಲಿ ಜನಾರ್ದನ ರೆಡ್ಡಿ ಒಡೆತನದ ಓಎಂಸಿ 2 ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಕರ್ನಾಟಕ ಮತ್ತು ಆಂಧ್ರದ ನಡುವಿನ ಗಡಿ ನಾಶ ಪಡಿಸಿ, ಬಳ್ಳಾರಿ ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅಕ್ರಮ ಅದಿರು ಸಾಗಾಟ ಮಾಡಿದ ಆರೋಪ ಇದೆ. ಈಗಾಗಲೇ ಅಕ್ರಮ ಸಾಬೀತಾಗಿ ಆಂಧ್ರದ ಸಿಬಿಐ ವಿಚಾರಣಾಧೀನ ನ್ಯಾಯಾಲಯ ಜನಾರ್ದನ ರೆಡ್ಡಿಗೆ ಶಿಕ್ಷೆಯನ್ನೂ ಪ್ರಕಟಿಸಿತ್ತು. ಅಮಿಕಸ್ ಕ್ಯೂರಿ ಹಾಗೂ ಆಂಧ್ರದ ಸಮ್ಮಿ ರೆಡ್ಡಿ ನೀಡಿದ್ದ ವರದಿ ಅನ್ವಯ ಕೋರ್ಟ್ ಹೊಸ ಸಮಿತಿ ರಚಿಸಿತ್ತು. ಸದ್ಯ ಈಗಿನ ನಿವೃತ್ತ ನ್ಯಾ. ದುಲಿಯಾ ಸಮಿತಿ ವರದಿಯಲ್ಲೂ ಅತಿಕ್ರಮಣ ನಡೆದಿದೆ ಎನ್ನುವುದು ದೃಢ ಪಟ್ಟಿದೆ.

ನಿವೃತ್ತಿ ನ್ಯಾ. ದುಲಿಯಾ ವರದಿಗೆ ಗಣಿಗುತ್ತಿಗೆ ಪಡೆದ ಮಾಲೀಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಜನವರಿ 5 ದೆಹಲಿಯಲ್ಲಿ ನಡೆಯಲಿರುವ ಸಭೆ ಹಮ್ಮಿಕೊಳ್ಳಲಾಗಿದೆ. ದಾಖಲೆ ಸಲ್ಲಿಸದಿದ್ದರೆ ದುಲಿಯಾ ಸಮಿತಿ ವರದಿಯನ್ನು ಮೂರು ತಿಂಗಳ ಒಳಗೆ ಅಂತಿಮಗೊಳಿಸಿ, ವರದಿ ಆಧಾರ ಮೇಲೆ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.