ಮನೆ ಅಂತಾರಾಷ್ಟ್ರೀಯ ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸದಿದ್ದರೆ ಸುಂಕ ಏರಿಕೆ – ಟ್ರಂಪ್‌

ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸದಿದ್ದರೆ ಸುಂಕ ಏರಿಕೆ – ಟ್ರಂಪ್‌

0

ವಾಷಿಂಗ್ಟನ್‌ : ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಅವರನ್ನು ಬಂಧಿಸಿದ ಬಳಿಕ ವಿಶ್ವಕ್ಕೆ ಧಮ್ಕಿ ಹಾಕಲು ಆರಂಭಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಮತ್ತೆ ಭಾರತದ ಮೇಲೆ ಸಿಟ್ಟಾಗಿದ್ದಾರೆ. ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸದೇ ಇದ್ದರೆ ಮತ್ತಷ್ಟು ದಂಡವನ್ನು ಹಾಕಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನಾನು ಸಂತೋಷವಾಗಿಲ್ಲ ಎನ್ನುವುದು ಅವರಿಗೆ ತಿಳಿದಿದೆ. ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು. ಅವರು ರಷ್ಯಾದ ಜೊತೆ ವ್ಯಾಪಾರ ಮಾಡುತ್ತಾರೆ ಮತ್ತು ನಾವು ಅವರ ಮೇಲೆ ಬಹಳ ಬೇಗ ಮತ್ತಷ್ಟು ಸುಂಕವನ್ನು ಹೆಚ್ಚಿಸಬಹುದು ಎಂದರು. ಈ ಹಿಂದೆ ಟ್ರಂಪ್‌ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತದೆ. ಮೋದಿ ನನಗೆ ಭರವಸೆ ನೀಡಿದ್ದಾರೆ ಎಂದಿದ್ದರು. ಈ ಹೇಳಿಕೆಯ ನಂತರವೂ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಮುಂದುವರಿಸಿತ್ತು.

2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ 191 ಬಿಲಿಯನ್ ಡಾಲರ್‌ನಿಂದ 500 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಭಾರತ ಮತ್ತು ಅಮೆರಿಕ ಹಾಕಿಕೊಂಡಿದೆ. ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಭಾರತ ಮತ್ತು ಅಮೆರಿಕದ ಪ್ರತಿನಿಧಿಗಳ ನಡುವೆ ಇಲ್ಲಿಯವರೆಗೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದರೂ ಇಲ್ಲಿಯವರೆಗೆ ಅಂತಿಮ ತಿರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಡೊನಾಲ್ಡ್‌ ಟ್ರಂಪ್‌ ತೆರಿಗೆ ಸಮರ ಆರಂಭಿಸಿದ ಬಳಿಕ ಯುರೋಪ್‌ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಅಮೆರಿಕಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಬೇರೆ ದೇಶಗಳಂತೆ ಭಾರತವು ಅಮೆರಿಕದ ಜೊತೆ ಮಾತುಕತೆ ನಡೆಸುತ್ತಿತ್ತು. ಮಾತುಕತೆಯ ವೇಳೆ ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು. ಹಲವು ಸುತ್ತಿನ ಮಾತುಕತೆ ನಡೆದರೂ ಭಾರತ ತನ್ನ ಹಠವನ್ನು ಬಿಟ್ಟಿರಲಿಲ್ಲ. ಇದಕ್ಕೆ ಸಿಟ್ಟಾದ ಟ್ರಂಪ್‌ ಭಾರತದ ಕೆಲ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದಾರೆ.

ಅಮೆರಿಕ ಸುಂಕ ವಿಧಿಸುತ್ತಿದ್ದಂತೆ ಭಾರತ ಆಫ್ರಿಕಾ, ಏಷ್ಯಾ, ಯರೋಪ್‌ ಜೊತೆ ವ್ಯಾಪಾರ ಮಾತುಕತೆ ನಡೆಸಲು ಮುಂದಾಯಿತು. ಈ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ ಟ್ರಂಪ್‌ ಮತ್ತೆ 25% ಸುಂಕ ಹೇರಿದರು. ಪರಿಣಾಮ ಆಮದಾಗುವ ಭಾರತದ ಕೆಲ ವಸ್ತುಗಳಿಗೆ ಈಗ ಅಮೆರಿಕದಲ್ಲಿ 50% ಸುಂಕ ವಿಧಿಸಲಾಗಿದೆ.