ಮನೆ ಅಂತಾರಾಷ್ಟ್ರೀಯ ನಾವು ನಿಜವಾದ ಸ್ನೇಹಿತರು, ಮುಂದಿನ ವರ್ಷದ ಒಳಗಡೆ ಭಾರತಕ್ಕೆ ಬರಲಿದ್ದಾರೆ ಟ್ರಂಪ್‌

ನಾವು ನಿಜವಾದ ಸ್ನೇಹಿತರು, ಮುಂದಿನ ವರ್ಷದ ಒಳಗಡೆ ಭಾರತಕ್ಕೆ ಬರಲಿದ್ದಾರೆ ಟ್ರಂಪ್‌

0

ನವದೆಹಲಿ : ಭಾರತ ಮತ್ತು ಅಮೆರಿಕ ನಿಜವಾದ ಸ್ನೇಹಿತರಾಗಿದ್ದು ಮುಂದಿನ ವರ್ಷದ ಒಳಗಡೆ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಟ್ರಂಪ್ ಅವರು ನಿಜವಾದ ಸ್ನೇಹಿತರಾಗಿದಾರೆ. ನಿಜವಾದ ಸ್ನೇಹಿತರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬಹುದು ಎಂದು ತಿಳಿಸಿದರು.

ಅಮೆರಿಕಕ್ಕೆ ಭಾರತದಷ್ಟು ಅತ್ಯಗತ್ಯವಾದ ಬೇರೆ ಯಾವುದೇ ರಾಷ್ಟ್ರವಿಲ್ಲ ಎಂದ ಅವರು ಇಂದಿನಿಂದ ಮತ್ತೆ ಎರಡು ದೇಶಗಳು ತಮ್ಮ ಮುಂದಿನ ಸುತ್ತಿನ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ಪುನರಾರಂಭಿಸಲಿವೆ ಎಂದರು. ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ಅವರ ಸ್ನೇಹವು ನಿಜವಾಗಿದೆ ಎಂದು ನಾನು ದೃಢೀಕರಿಸಬಲ್ಲೆ ಎಂದು ಗೋರ್ ಒತ್ತಿ ಹೇಳಿದರು.

ಭಾರತ ವಿಶ್ವದ ಅತಿದೊಡ್ಡ ರಾಷ್ಟ್ರ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ವ್ಯಾಪಾರವು ಬಹಳ ಮುಖ್ಯವಾದರೂ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯದಂತಹ ಇತರ ಪ್ರಮುಖ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳು ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಿವೆ ಎಂದು ಅವರು ಹೇಳಿದರು. ಭಾರತವು ಪ್ಯಾಕ್ಸ್ ಸಿಲಿಕಾ ಒಕ್ಕೂಟದ ಸದಸ್ಯ ದೇಶವಾಗಲಿದೆ ಎಂದು ಗೋರ್ ಘೋಷಿಸಿದರು. ಮುಂದಿನ ತಿಂಗಳು ಈ ರಾಷ್ಟ್ರಗಳ ಗುಂಪಿಗೆ ಪೂರ್ಣ ಸದಸ್ಯರಾಗಿ ಸೇರಲು ಭಾರತವನ್ನು ಆಹ್ವಾನಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಏನಿದು ಪ್ಯಾಕ್ಸ್ ಸಿಲಿಕಾ (Pax Silica)? – ಪ್ಯಾಕ್ಸ್ ಸಿಲಿಕಾ ಎಂಬುದು 2025 ರ ಕೊನೆಯಲ್ಲಿ ಸಿಲಿಕಾನ್, ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಗಾಗಿ ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ನಾವೀನ್ಯತೆ-ಚಾಲಿತ ಜಾಗತಿಕ ಪೂರೈಕೆ ಸರಪಳಿಯನ್ನು ಸ್ಥಾಪಿಸಲು ಅಮೆರಿಕ ನೇತೃತ್ವದಲ್ಲಿ ಆರಂಭಿಸಲಾದ ಒಕ್ಕೂಟ. ಈ ಮೈತ್ರಿಕೂಟವು ಟ್ರಂಪ್ ಆಡಳಿತದ ಆರ್ಥಿಕ ಭದ್ರತಾ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಇದು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಜಾಗತಿಕ ಚಿಪ್ ಉದ್ಯಮದಲ್ಲಿ ಅದರ ಪ್ರಭಾವವನ್ನು ಎದುರಿಸುವ ಗುರಿಯನ್ನು ಹೊಂದಿದೆ. ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್‌, ಇಸ್ರೇಲ್ ಮತ್ತು ಆಸ್ಟ್ರೇಲಿಯಾ ಸ್ಥಾಪಕ ಸದಸ್ಯ ರಾಷ್ಟ್ರಗಳಾಗಿವೆ.