ಮನೆ ಅಂತಾರಾಷ್ಟ್ರೀಯ ಇರಾನ್‌ ಜೊತೆ ವ್ಯಾಪಾರ ಮಾಡಿದರೆ, 25% ಸುಂಕ – ಭಾರತದ ಮೇಲೆ ಪರಿಣಾಮ..!

ಇರಾನ್‌ ಜೊತೆ ವ್ಯಾಪಾರ ಮಾಡಿದರೆ, 25% ಸುಂಕ – ಭಾರತದ ಮೇಲೆ ಪರಿಣಾಮ..!

0

ವಾಷಿಂಗ್ಟನ್‌/ನವದೆಹಲಿ : ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ 25% ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್‌ ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ 600 ಮಂದಿ ಮೃತಪಟ್ಟಿದ್ದು ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಸಮಯದಲ್ಲೇ ಟ್ರಂಪ್‌ ಅವರಿಂದ ಈ ಮಹತ್ವದ ಹೇಳಿಕೆ ಬಂದಿದೆ.

ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್‌, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನೊಂದಿಗೆ ವಾಣಿಜ್ಯ ಸಂಬಂಧವನ್ನು ಕಾಯ್ದುಕೊಳ್ಳುವ ದೇಶಗಳು ಅಮೆರಿಕದೊಂದಿಗೆ ನಡೆಸುವ ಯಾವುದೇ ವ್ಯಾಪಾರದ ಮೇಲೆ ಈ ಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಅಂತಿಮ ಮತ್ತು ನಿರ್ಣಾಯಕ ಎಂದು ಹೇಳಿದ್ದಾರೆ. ಅಮೆರಿಕ ನಿರ್ಧಾರದಿಂದ ಭಾರತ ಸೇರಿದಂತೆ ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಟರ್ಕಿಯ ಮೇಲೂ ಪರಿಣಾಮ ಬೀರಲಿದೆ.

ಚೀನಾವನ್ನು ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಪರಿಗಣಿಸಲಾಗಿದ್ದರೂ ಭಾರತ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ರಫ್ತು ಮಾಡುತ್ತಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಭಾರತವು 2024-25ರ ಆರ್ಥಿಕ ವರ್ಷದಲ್ಲಿ ಇರಾನ್‌ಗೆ 1.24 ಶತಕೋಟಿ ಡಾಲರ್‌ ಮೌಲ್ಯದ ಸರಕುಗಳನ್ನು ರಫ್ತು ಮಾಡಿದರೆ 440 ಮಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಒಟ್ಟು ಒಟ್ಟು ವ್ಯಾಪಾರವು 1.68 ಶತಕೋಟಿ ಡಾಲರ್‌ ಅಂದರೆ ಸರಿಸುಮಾರು 14 -15 ಸಾವಿರ ಕೋಟಿ ರೂ.ಇದೆ.

ಇರಾನ್‌ಗೆ ಭಾರತದ ಪ್ರಮುಖ ರಫ್ತುಗಳಲ್ಲಿ ಸಾವಯವ ರಾಸಾಯನಿಕಗಳು, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧಗಳು, ಹಣ್ಣುಗಳು, ಬೇಳೆಕಾಳುಗಳು ಮತ್ತು ಮಾಂಸ ಉತ್ಪನ್ನಗಳು ಸೇರಿವೆ. ಪ್ರಮುಖ ಆಮದುಗಳಲ್ಲಿ ಮೆಥನಾಲ್, ಪೆಟ್ರೋಲಿಯಂ ಬಿಟುಮೆನ್, ದ್ರವೀಕೃತ ಪ್ರೋಪೇನ್, ಸೇಬುಗಳು, ಖರ್ಜೂರ ಮತ್ತು ರಾಸಾಯನಿಕಗಳು ಸೇರಿವೆ. ನಿರ್ಬಂಧಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರವು ತೀವ್ರವಾಗಿ ಏರಿಳಿತಗೊಂಡಿದೆ. 2020–21ರಲ್ಲಿ ತೀವ್ರವಾಗಿ ಕುಸಿದ ನಂತರ ದ್ವಿಪಕ್ಷೀಯ ವ್ಯಾಪಾರವು 2022–23ರಲ್ಲಿ 2.33 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ನಂತರ ಮತ್ತೆ ನಿರ್ಬಂಧ ಹೇರಿದ್ದರಿಂದ ವ್ಯಾಪಾರ ಕುಸಿದಿತ್ತು.

ಟ್ರಂಪ್‌ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ. ಈಗ ಮತ್ತೆ 25% ಸುಂಕ ವಿಧಿಸುವ ನಿರ್ಧಾರ ಪ್ರಕಟಿಸಿದ್ದರಿಂದ ಭಾರತದ ಕೆಲ ವಸ್ತುಗಳಿಗೆ ಅಮೆರಿಕದಲ್ಲಿ 75% ಸುಂಕ ಹಾಕಲಾಗುತ್ತದೆ.