ಯಾದಗಿರಿ : ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಧ್ವಜದ ಬಗ್ಗೆ ಪೋಟೋ ಹಾಕಿದಕ್ಕೆ ತಾಯಿ, ಮಗನಿಗೆ ಥಳಿಸಿದ ಘಟನೆ ಗುರುಮಠಕಲ್ ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಶಿವಮಾಲಾಧಾರಿಗಳಿಂದ ಧಾರ್ಮಿಕ ಕಾರ್ಯಕ್ರಮ ನಡೆಸುವ ಬಗ್ಗೆ ಗ್ರಾಮದಲ್ಲಿ ಕೇಸರಿ ಬಾವುಟಗಳನ್ನು ಅಳವಡಿಸಲಾಗಿತ್ತು. ಗ್ರಾಮದಲ್ಲಿ ಹಾಕಿದ್ದ ಕೇಸರಿ ಧ್ವಜಗಳ ಫೋಟೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ.
ಕೇಸರಿ ಧ್ವಜ ಅಳವಡಿಕೆ ಮಾಡಿದ ಪೋಟೋಗಳು ಮಸೀದಿ ಮೇಲೆ ಇಟ್ಟ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿದ ಹಿನ್ನಲೆಯಲ್ಲಿ ತಪ್ಪಾಗಿ ಅರ್ಥೈಸಿಕೊಂಡ 7 ಮಂದಿ ಯುವಕರು ಪೋಟೋ ಸ್ಟೇಟಸ್ ಹಾಕಿದ್ದ ರಮೇಶ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಮಗನಿಗೆ ಯಾಕೆ ಹೊಡೆದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ತಾಯಿ ನಾಗಮ್ಮಳ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದೆ.

ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದು ಮಧ್ಯರಾತ್ರಿಯೇ ಶಿವ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಗ್ರಾಮದ ನಡು ರಸ್ತೆಯಲ್ಲಿ ಶಿವ, ಪಾರ್ವತಿ ಮತ್ತು ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಕೂಡಲೇ ಹಲ್ಲೆ ಮಾಡಿದವರು ಕ್ಷಮೆ ಕೊರಬೇಕು. ಹಲ್ಲೆ ಮಾಡಿದವರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಹಲ್ಲೆಗೊಳಗಾದ ನಾಗಮ್ಮ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮುಲಾಂಗ, ರಿಯಾಜ್, ಖಾಜಾ, ಖಲೀಲ್, ಆಸೀಫ್, ಖಲೀಂ, ಸಮೀರ್ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.













