ತುಮಕೂರು : ತನ್ನ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕೂಡ ಕ್ಯಾರೇ ಎನ್ನದ ಕಂದಾಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಅಕ್ರೋಶಗೊಂಡ ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರು ತಾಲೂಕು ಕಚೇರಿ ಮುಂದೆ ಮೈಕ್ ಹಿಡಿದು ‘ನನಗೆ ಅಧಿಕಾರಿಗಳಿಗೆ ಲಂಚ ನೀಡಲು ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ’ ಎಂದು ಘೋಷಣೆ ಕೂಗಿದ್ದಾರೆ.
ಪ್ರಸನ್ನಕುಮಾರ್ ತನಗಿರುವ ಜಮೀನಿನಲ್ಲೇ ತರಕಾರಿ, ಇತರೆ ವ್ಯವಸಾಯೋತ್ಪನ್ನ ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಜಮೀನಿಗೆ ರಸ್ತೆ ಇಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದಾರೆ. ಅವರ ಮನವಿಗೆ ಕಿವಿಗೊಡದ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ರೈತನಿಗೆ ಒಂದು ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಲೋಕಾಯುಕ್ತ ಸೂಚಿಸಿತ್ತು.
ಎರಡು ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿ ತಹಶೀಲ್ದಾರ್ ಬಳಿ ಮನವಿ ಮಾಡಿದ್ದರು. ಅವರು ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಕಂದಾಯ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಿಗರಾಗಲಿ ಬಂದಿಲ್ಲ. ಇದರಿಂದ ಬೆಸತ್ತ ರೈತ ಪ್ರಸನ್ನಕುಮಾರ್ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಮುಂದಾಗಿದ್ದಾರೆ.















