ನವದೆಹಲಿ : ಕರ್ನಾಟಕದ 2ನೇ ರಾಜಧಾನಿ ಎಂದೇ ಖ್ಯಾತವಾದ ಬೆಳಗಾವಿ ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿದೆ. ಆದರೆ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಗಣನೀಯವಾಗಿ ಕಡಿಮೆಯಾಗಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ಬೆಳಗಾವಿ ವಿಮಾನ ನಿಲ್ದಾಣವನ್ನು 262.64 ಕೋಟಿ ರೂಪಾಯಿ ವ್ಯಯದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ 25.98 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣಾ ಕಾರ್ಯಗಳು ನಡೆಯುತ್ತಿವೆ. ಹಿಂದೆ ಐದು ವಿಮಾನಯಾನ ಸಂಸ್ಥೆಗಳ ಮೂಲಕ 13 ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಇಂದು ಕೇವಲ ಎರಡು ಸಂಸ್ಥೆಗಳು ಮಾತ್ರ ಸೇವೆಯನ್ನು ಒದಗಿಸುತ್ತಿದ್ದು, ಐದು ನಗರಗಳಿಗೆ ಮಾತ್ರ ಹಾರಾಟಗಳು ಸೀಮಿತವಾಗಿವೆ.
2024-25ನೇ ಸಾಲಿನಲ್ಲಿ ಸುಮಾರು 3.40 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸಿದ್ದಾರೆ. ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗದಿದ್ದರೂ ಸಹ ವಿಮಾನಯಾನ ಸೇವೆಗಳು ಸ್ಥಗಿತಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸಬ್ಸಿಡಿ ನೀಡುವವರೆಗೂ ಸೇವೆಗಳು ನಡೆಯುತ್ತವೆಯಾದರೂ, ಯೋಜನೆ ಮುಗಿದ ಬಳಿಕ ಸಂಸ್ಥೆಗಳು ಹಾರಾಟಗಳನ್ನು ನಿಲ್ಲಿಸಿವೆ ಎಂದು ಸಂಸದರು ಆರೋಪಿಸಿದ್ದಾರೆ.
ಬೆಳಗಾವಿಯಿಂದ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಗೆ ಸುಮಾರು 85% ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವಾಗಲೂ ಸೇವೆಗಳನ್ನು ನಿಲ್ಲಿಸಿದ ವಿಮಾನಯಾನ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಈರಣ್ಣ ಕಡಾಡಿ ಅವರು ರಾಜ್ಯಸಭೆಯಲ್ಲಿ ಒತ್ತಾಯಿಸಿದರು. ಮುಂಬೈ, ಪುಣೆ, ಇಂದೋರ್ ಹಾಗೂ ಚೆನ್ನೈ ಮುಂತಾದ ನಗರಗಳಿಗೆ ಸಂಪರ್ಕವನ್ನು ಪುನರಾರಂಭಿಸುವಂತೆಯೂ ಕೋರಿದ್ದಾರೆ.














