ಮನೆ ರಾಜ್ಯ ಪ್ರಾಚೀನ ಶಿಲಾಶಾಸನ, ಸರ್ಪರೂಪದ ಶಿಲ್ಪಗಳು ಪತ್ತೆ – ಸಂಶೋಧನೆ ಮಾಡುವಂತೆ ಸರ್ಕಾರಕ್ಕೆ ಆಗ್ರಹ..!

ಪ್ರಾಚೀನ ಶಿಲಾಶಾಸನ, ಸರ್ಪರೂಪದ ಶಿಲ್ಪಗಳು ಪತ್ತೆ – ಸಂಶೋಧನೆ ಮಾಡುವಂತೆ ಸರ್ಕಾರಕ್ಕೆ ಆಗ್ರಹ..!

0

ಬೀದರ್ : ಐತಿಹಾಸಿಕ ಲಕ್ಕುಂಡಿ ಮತ್ತು ಬಳ್ಳಾರಿಯಲ್ಲಿ ನಿಧಿ ಮತ್ತು ಶಿಲಾಶಾಸನಗಳು ಪತ್ತೆಯಾಗಿ ರಾಜ್ಯದ ಗಮನ ಸೆಳೆದಿತ್ತು. ಇದೀಗ ಬೀದರ್ ಜಿಲ್ಲೆಯಲ್ಲೂ ಐತಿಹಾಸಿಕ ಪ್ರಾಚೀನ ಶಿಲಾ ಶಾಸನಗಳು ಹಾಗೂ ಸರ್ಪ ರೂಪದ ಶಿಲ್ಪಗಳು ಪತ್ತೆಯಾಗಿವೆ. 12ನೇ ಶತಮಾನದ ಚಾಲುಕ್ಯರ ಸಮಯದಲ್ಲಿ 108 ಐತಿಹಾಸಿಕ ದೇವಸ್ಥಾನಗಳು ಒಂದೇ ಕಡೆ ಇದ್ದವು ಎಂಬ ಪ್ರತೀತಿ. ಹೀಗಾಗಿ ಸಂಶೋಧನೆ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹ ಮಾಡುತ್ತಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಇತಿಹಾಸ ಸಾರುವ ಗ್ರಾಮವಾಗಿದೆ. ಈ ಐತಿಹಾಸಿಕ ಹಿನ್ನೆಲೆಯುಳ್ಳ ಈ ಗ್ರಾಮದಲ್ಲಿ ಈಗ ಭೂಗರ್ಭದಿಂದ ಪುರಾತನ ಅವಶೇಷಗಳು ಹೊರಬರುತ್ತಿವೆ. ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶಕ್ಕಾಗಿ ಅಡುಗೆ ತಯಾರಿ ನಡೆಸಲು ಭವಾನಿ ದೇವಸ್ಥಾನದ ಹಿಂಭಾಗದ ಜಾಗವನ್ನು ಸ್ವಚ್ಛಗೊಳಿಸುವಾಗ ಈ ಅಚ್ಚರಿ ಬೆಳಕಿಗೆ ಬಂದಿದೆ.

ಶಿವಲಿಂಗ ಹಾಗೂ ನಾಗ ಸರ್ಪದ ವಿಗ್ರಹಗಳು, ಅಪರೂಪದ ಐದು ಹೆಡೆಯ ನಾಗಮೂರ್ತಿ, ಪ್ರಾಚೀನ ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪಗಳು ಪತ್ತೆಯಾಗಿದ್ದು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಗ್ರಾಮಸ್ಥರ ಪ್ರಕಾರ ಇಲ್ಲಿ ಸುಮಾರು 108 ದೇವಸ್ಥಾನಗಳಿದ್ದವು ಎಂಬ ಪ್ರತೀತಿ ಇದೆ. ಇದಕ್ಕೆ ಪೂರಕವೆಂಬಂತೆ 7-8 ವರ್ಷಗಳ ಹಿಂದೆ ವಿಷ್ಣು ಹಾಗೂ ಕಾಳಿಕಾ ಮಾತಾ ವಿಗ್ರಹಗಳು ಪತ್ತೆಯಾಗಿದ್ದವು. ಈಗಲೂ ಅಷ್ಟೇ, ಜನರು ಹೊಸ ಮನೆ ಕಟ್ಟಲು ಅಥವಾ ಜಾಗ ಅಗೆಯಲು ಹೋದರೆ ಸಾಕಷ್ಟು ಶಿಲ್ಪಕಲೆಗಳು ಪತ್ತೆ ಆಗುತ್ತಿವೆ.

ಗ್ರಾಮದಲ್ಲಿ ಕಾಲಕಾಲಕ್ಕೆ ಇಂತಹ ದೈವಿಕ ಕುರುಹುಗಳು ಸಿಗುತ್ತಲೇ ಇವೆ. ಇದು ಕೇವಲ ಕಲ್ಲುಗಳಲ್ಲ, ನಮ್ಮ ಪೂರ್ವಜರ ಸಂಸ್ಕೃತಿಯ ಪ್ರತೀಕವಾಗಿದೆ. ಸರ್ಕಾರ ಮತ್ತು ಪುರಾತತ್ವ ಇಲಾಖೆ ತಕ್ಷಣ ಇಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ನಡೆಸಬೇಕು. ಆಗ ಮಾತ್ರ ಈ ಮಣ್ಣಿನ ನಿಜವಾದ ಇತಿಹಾಸ ಹೊರಬರಲು ಸಾಧ್ಯ. ನಾರಾಯಣಪುರ ಗ್ರಾಮದಲ್ಲಿ ಸಂಶೋಧನೆ ಅಗತ್ಯ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾಗಿರುವ ಈ ಶಿಲಾಶಾಸನಗಳು ಮತ್ತು ಮೂರ್ತಿಗಳು 12ನೇ ಶತಮಾನಕ್ಕೆ ಸೇರಿವೆ ಎಂದು ಹೇಳಲಾಗುತ್ತಿದೆ. ಈ ಗ್ರಾಮದ ಅಡಿಯಲ್ಲಿ ಬೃಹತ್ ದೇವಾಲಯಗಳ ಸಂಕೀರ್ಣವೇ ಅಡಗಿದೆ ಎಂದು ಹೇಳಲಾಗುತ್ತಿದ್ದು ಈ ಎಲ್ಲ ಪ್ರಶ್ನೆಗಳಿಗೆ ಪುರಾತತ್ವ ಇಲಾಖೆಯ ತಜ್ಞರು ಉತ್ತರಿಸಬೇಕಿದೆ. ಕೆಲವೇ ದಿನಗಳಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ ಎನ್ನಲಾಗಿದೆ.