ಮನೆ ರಾಷ್ಟ್ರೀಯ ಬಾಂಗ್ಲಾದಲ್ಲಿಂದು ಮೊದಲ ಚುನಾವಣೆ – ಯಾರ ಹೆಗಲಿಗೆ ಪಟ್ಟ..?!

ಬಾಂಗ್ಲಾದಲ್ಲಿಂದು ಮೊದಲ ಚುನಾವಣೆ – ಯಾರ ಹೆಗಲಿಗೆ ಪಟ್ಟ..?!

0

ಢಾಕಾ : 2024 ರ ದಂಗೆಯ ಬಳಿಕ ಇಂದು (ಫೆ.12) ಬಾಂಗ್ಲಾದೇಶದಲ್ಲಿ ನಿರ್ಣಾಯಕ ರಾಷ್ಟ್ರೀಯ ಚುನಾವಣೆ ನಡೆಯುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತ ಕುಸಿತ ಕಂಡು 18 ತಿಂಗಳ ಬಳಿಕ, ಅಲ್ಲಿನ ಮತದಾರ ತನ್ನ ಹಕ್ಕು ಚಲಾಯಿಸುತ್ತಿದ್ದಾನೆ. ಚುನಾವಣೆ ಬಳಿಕ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಯ ಜವಾಬ್ದಾರಿ ಹೊರುವ ಸರ್ಕಾರ ಅಸ್ತಿತ್ವಕ್ಕೆ ಬರಲಿ ಎಂಬುದು ಭಾರತೀಯರ ಪ್ರಾರ್ಥನೆಯಾಗಿದೆ.

ಇಂದು ಬೆಳಗ್ಗೆ 7:30 ರಿಂದ 42,700 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮತದಾನ ಶುರುವಾಗಿದೆ. ಸಂಜೆ 4:30 ರ ವರೆಗೆ ಮತದಾನ ನಡೆಯಲಿದೆ. ಫೆ.13 (ಶುಕ್ರವಾರ) ರಂದು ಬೆಳಿಗ್ಗೆ ಅಧಿಕೃತ ಫಲಿತಾಂಶ ಹೊರಬೀಳಲಿದೆ. ವಿಶೇಷವೆಂದರೆ ದಾಖಲೆ ಸಂಖ್ಯೆಯ ಫಸ್ಟ್‌ ಟೈಮ್‌ ವೋಟರ್ಸ್‌ ಸೇರಿಂದಂತೆ ಈ ಬಾರಿ ಒಟ್ಟು 12.77 ಕೋಟಿ ಮತದಾರರು ನೋಂದಣಿ ಆಗಿದ್ದಾರೆ.

ಮುಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾದೇಶ ಮಧ್ಯಂತರ ಸರ್ಕಾರ, ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯೂನಸ್‌ ಅವಧಿಯು ಬಾಂಗ್ಲಾದೇಶದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಿಂದ ಗುರುತಿಸಲ್ಪಟ್ಟಿದ್ದು, ಭಾರತದಿಂದ ದೂರ ಸರಿದು ಪಾಕಿಸ್ತಾನ ಮತ್ತು ಚೀನಾವನ್ನು ಅಪ್ಪಿಕೊಂಡಿದೆ.

ಇತ್ತೀಚಿಗೆ ಬಾಂಗ್ಲಾದೇಶಲ್ಲಿ ಭಾರತ ವಿರೋಧಿ ಪ್ರತಿಭಟನೆ ಹೆಚ್ಚಾಗಿದ್ದು, ಉದ್ರಿಕ್ತ ಗುಂಪು ಅಲ್ಪಸಂಖ್ಯಾತ ಹಿಂದೂಗಳನ್ನ ಟಾರ್ಗೆಟ್‌ ಮಾಡಿ ದಾಳಿ ಮಾಡುತ್ತಿದೆ. ಈ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಅನೇಕ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗುವಂತೆ ಭಾರತ ಪದೇ ಪದೇ ಯೂನಸ್‌ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ನಡೆಯುವ ಚುನಾವಣೆ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಬದಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಅನೇಕರು ಭಾವಿಸುವಂತೆ ಖಲೀದಾ ಜಿಯಾ ಅವರ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷದಿಂದ ತಾರಿಕ್ ರೆಹಮಾನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದಾರೆ. ಬಿಎನ್‌ಪಿಯ ದೊಡ್ಡ ಎದುರಾಳಿ ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ, ಒಂದು ಕಾಲದಲ್ಲಿ ಅದರ ಮಿತ್ರ ಪಕ್ಷವಾಗಿದ್ದ, ಕಟ್ಟಾ ಇಸ್ಲಾಮಿಕ್ ಪಕ್ಷ.

ಬಾಂಗ್ಲಾದೇಶ ವೀಕ್ಷಕರು ಬಿಎನ್‌ಪಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದರೂ ಜಮಾತ್ ಚುನಾವಣೆಯಲ್ಲಿ ನೆಕ್‌ ಟು ನೆಕ್‌ ಫೈಟ್‌ ಕೊಡಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಕಳೆದ ವರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್, ಅವಾಮಿ ಲೀಗ್ ಅನ್ನು ವಿಸರ್ಜಿಸಿದ್ದಾರೆ. ಜೊತೆಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನ ನಿಷೇಧಿಸಿದ್ದಾರೆ.