ಮನೆ ಪ್ರಕೃತಿ ಮತ್ತೂರು ಒಂಟಿಸಲಗ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲ

ಮತ್ತೂರು ಒಂಟಿಸಲಗ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲ

0

ಹಾಸನ(Hassan): ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದಿರುವ ಹಾಗೂ ಬೆಳೆ ನಾಶ ಮಾಡುತ್ತಿರುವ `ಮತ್ತೂರು’ ಎಂಬ ಹೆಸರಿನ ಒಂಟಿಸಲಗ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳದಿಂದ ಬೇಸತ್ತು ಎರಡು ಗಂಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲು ಹಾಗೂ ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರ್ಕಾರ ಅನುಮತಿ ನೀಡಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಆರು ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಆನೆಯನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲಾಗಿದೆ.  

ಮತ್ತೂರು ಸೆರೆಹಿಡಿಯಲು ಸರ್ಕಸ್:  

ಉಳಿದಂತೆ `ಮತ್ತೂರು’ ಎಂಬ ಹೆಸರಿನ ಒಂಟಿಸಲಗ ಹೆಚ್ಚು ಬಲಿಷ್ಠವಾಗಿರುವ ಕಾರಣ ಆರು ಸಾಕಾನೆಗಳ ಜೊತೆಗೆ ಕಾಡಾನೆ ಆಪರೇಷನ್‌ನಲ್ಲಿ ಮತ್ತೆರಡು ಸಾಕಾನೆಗಳನ್ನು ಕರೆತರಲಾಗಿತ್ತು.

ಭೀಮ, ಭೀಮ್, ಹರ್ಷ, ಅಜೇಯ, ಮಹೇಂದ್ರ, ಪ್ರಶಾಂತ್ ಹೆಸರಿನ ಆರು ಸಾಕಾನೆಗಳೊಂದಿಗೆ ಬೆಳಿಗ್ಗೆ ಎಂಟು ಗಂಟೆಗೆ ಸಕಲೇಶಪುರ ತಾಲ್ಲೂಕಿನ ಹೆಗ್ಗೋವೆ ಬಳಿಯಿಂದ ಮತ್ತೂರು ‌ಆಪರೇಷನ್ ಆರಂಭಿಸಿದರು. ಕಾಡಾನೆ ಇರುವ ಸ್ಥಳ ಪತ್ತೆ ಹಚ್ಚಿ ವೈದ್ಯರು ಆನೆಗೆ ಇಂಜೆಕ್ಷನ್ ಡಾಟ್ ಮಾಡಲು ಮುಂದಾಗುತ್ತಿದ್ದಂತೆ ಓಡಲು ಆರಂಭಿಸಿತು. ಕಾಡಾನೆ ಬೆನ್ನುಬಿದ್ದ ವೈದ್ಯರು ಅರಣ್ಯ ಇಲಾಖೆ ಸಿಬ್ಬಂದಿ ಹರಸಹಾಸ ಪಟ್ಟರು ಇಂಜೆಕ್ಷನ್ ನೀಡಲು ಸಾಧ್ಯವಾಗಲಿಲ್ಲ.

ಈ ನಡುವೆ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಕೂಡ ಕಾರ್ಯಾಚರಣೆಗೆ ತೊಡಕಾಗಿತ್ತು.  ಮಧ್ಯಾಹ್ನವಾದರೂ ಕಾಡಾನೆ ಒಂದು ಕಡೆ‌ ನಿಲ್ಲದೆ ಕಾಫಿತೋಟ, ಕಾಡಿನೊಳಗೆಲ್ಲಾ ಓಡಾಡಿತು.ನಂತರ ವಡೂರು ಗ್ರಾಮದೊಳಗೆ ಪ್ರವೇಶಿಸಿತು. ಕಾಡಾನೆ ಕಂಡು ದಿಕ್ಕಪಾಲಾಗಿ ಓಡಿದರು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಂಟಿ ಸಲಗ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದರು.‌ ಕೂಡಲೇ ಕೆಲಸ ಸ್ಥಗಿತಗೊಳಿಸಿ ಮನೆ‌ ಕಡೆ ಹೊರಟರು.

ಆದರೆ ಕಾಡಾನೆ ಸೆರೆ ಹಿಡಯಲೇಬೇಕೆಂದು ಶಾತಾಯಗತಾಯ ಪ್ರಯತ್ನಪಟ್ಟು ಹತ್ತಾರು ಕಿಲೋಮೀಟರ್ ಅಲೆದರು ಮತ್ತೂರು ಸೆರೆ ಸಿಕ್ಕಲಿಲ್ಲ.