ಮನೆ ರಾಷ್ಟ್ರೀಯ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಉದ್ಯೋಗದಾತರು ಮಹಿಳೆಯರನ್ನು ನೇಮಿಸುವುದಿಲ್ಲ – ಸುಪ್ರೀಂ ಕೋರ್ಟ್‌

ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಉದ್ಯೋಗದಾತರು ಮಹಿಳೆಯರನ್ನು ನೇಮಿಸುವುದಿಲ್ಲ – ಸುಪ್ರೀಂ ಕೋರ್ಟ್‌

0

ನವದೆಹಲಿ : ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ ನೀಡಿದರೆ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ನಾವು ಅಂತಹ ಕಾನೂನನ್ನು ರೂಪಿಸಲು ನಿರ್ದೇಶನ ನೀಡಿದರೆ ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ವಕೀಲ ಶೈಲೇಂದ್ರ ಮಣಿ ಎಂಬವರು ಸಂಬಳದೊಂದಿಗೆ ಮುಟ್ಟಿನ ರಜೆ ನೀಡುವಂತೆ ನಿಯಮಗಳನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಸಿಜೆಐ ಮತ್ತುನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ, ಇಂತಹ ಕಾನೂನು ರೂಪಿಸಿದರೆ ಉದ್ಯೋಗಸ್ಥ ಮಹಿಳೆಯರಲ್ಲಿ ಪುರುಷರಿಗಿಂತ ನಾವು ಕಡಿಮೆ ಇದ್ದೇವೆ ಎಂಬ ಭಾವನೆ ಬರಬಹುದು. ಉದ್ಯೋಗದಾತರ ಮನಸ್ಥಿತಿ ನಿಮಗೆ ತಿಳಿದಿಲ್ಲ. ಮುಟ್ಟಿನ ಆರೋಗ್ಯದ ಕಾಳಜಿ ಮುಖ್ಯವಾದರೂ, ಕಡ್ಡಾಯಗೊಳಿಸುವ ಕಾನೂನನ್ನು ತಂದ ತಕ್ಷಣ ಮಹಿಳೆಯರನ್ನು ಅವರು ನೇಮಿಸಿಕೊಳ್ಳದೇ ಇರುವ ಸಾಧ್ಯತೆಗಳಿದೆ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು. ಅರ್ಜಿ ವಜಾಗೊಳಿಸಿದರೂ ಕೇಂದ್ರ ಸರ್ಕಾರ ಈ ಬಗ್ಗೆ ನೀತಿ ರೂಪಿಸುವಂತೆ ನಿರ್ದೇಶಿಸಿತು.

ಪ್ರತಿ ತಿಂಗಳು ಮುಟ್ಟಿನ ರಜೆಯನ್ನು ಕಾನೂನುಬದ್ಧ ಅವಶ್ಯಕತೆಯನ್ನಾಗಿ ಮಾಡುವುದರಿಂದ ಮಹಿಳೆಯರ ವೃತ್ತಿಜೀವನದ ಬೆಳವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿ ಪರಿಣಾಮ ಬೀರಬಹುದು. ನೀವು ಇಡೀ ಖಾಸಗಿ ವಲಯಕ್ಕೆ ತಿಂಗಳಿಗೊಮ್ಮೆ ರಜೆ ತೆಗೆದುಕೊಳ್ಳುವ ಹಕ್ಕನ್ನು ಸೃಷ್ಟಿಸುತ್ತಿದ್ದೀರಿ. ಇದು ಅವರ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಸಿಜೆಐ ಹೇಳಿದರು.

ಹೆಚ್ಚುವರಿ ರಜೆ ಕಡ್ಡಾಯವಾದರೆ, ಉದ್ಯೋಗದಾತರು ಮಹಿಳೆಯರನ್ನು ತಾತ್ಸಾರದಿಂದ ನೋಡಬಹುದು ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು. ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಮುಟ್ಟಿನ ರಜೆಯನ್ನು ನೀಡಿದೆ ಎಂದು ವಕೀಲರು ತಿಳಿಸಿದ್ದಕ್ಕೆ, ಸ್ವಯಂಪ್ರೇರಿತವಾಗಿ ರಜೆ ನೀಡಿದರೆ ಅದು ಅತ್ಯುತ್ತಮ ಮತ್ತು ತುಂಬಾ ಒಳ್ಳೆಯದು.

ಆದರೆ ಕಾನೂನಿನಲ್ಲಿ ಕಡ್ಡಾಯ ಮಾಡಬೇಕೆಂದು ಸೂಚಿಸಿದ ತಕ್ಷಣ, ಅದು ಮಹಿಳೆಯರ ವೃತ್ತಿಜೀವನಕ್ಕೆ ಎಷ್ಟು ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ. ಯಾರೂ ಅವರಿಗೆ ಜವಾಬ್ದಾರಿಗಳನ್ನು ನೀಡುವುದಿಲ್ಲ ಎಂದು ಕೋರ್ಟ್‌ ಹೇಳಿತು. ಅರ್ಜಿದಾರರು ಈ ವಿಷಯದ ಬಗ್ಗೆ ಮೂರನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. 2023 ಮತ್ತು 2024 ರಲ್ಲಿ ನಡೆದ ಹಿಂದಿನ ವಿಚಾರಣೆಗಳಲ್ಲಿ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ವಿಷಯವನ್ನು ಪರಿಗಣಿಸುವಂತೆ ಸೂಚಿಸಿತ್ತು.