ಬೆಂಗಳೂರು : ಆನ್ಲೈನ್ ಗ್ಯಾಸ್ ಬುಕ್ಕಿಂಗ್ಗೂ ಮುನ್ನ ಎಚ್ಚರವಾಗಿರಿ. ಏಜೆನ್ಸಿಗಳ ಹೆಸರಲ್ಲಿ ಗ್ಯಾಸ್ ಸಮಸ್ಯೆಯನ್ನು ಬಂಡವಾಳ ಮಾಡಿಕೊಳ್ಳಲು ಸೈಬರ್ ವಂಚಕರು ಮುಂದಾಗಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಆಗುತ್ತಿರುವ ಕಾರಣ ಬೆಂಗಳೂರಿನಲ್ಲಿ ಗ್ಯಾಸ್ ಅಭಾವ ಉಂಟಾಗಿದೆ.
ಜನರು ಮನೆಗಳಲ್ಲಿ ಗ್ಯಾಸ್ ಸಿಗದೇ ಪರದಾಡುತ್ತಿದ್ದಾರೆ. ಗ್ಯಾಸ್ ಎಜೆನ್ಸಿಗಳ ಮುಂದೆ ಗ್ಯಾಸ್ಗಾಗಿ ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ದಿನೇ ದಿನೇ ಗ್ಯಾಸ್ ಸಮಸ್ಯೆ ಡಬಲ್ ಆಗಿದೆ. ಜನರು ಎದುರಿಸುತ್ತಿರುವ ಗ್ಯಾಸ್ ಸಮಸ್ಯೆಯನ್ನ ಸೈಬರ್ ವಂಚಕರು ಬಂಡವಾಳ ಮಾಡಿಕೊಳ್ಳಲು ವಿವಿಧ ರೀತಿಯಾಗಿ ಐಡಿಯಾಗಳನ್ನ ಬಳಕೆ ಮಾಡಿ, ಜನರನ್ನ ದೋಚಲು ಮುಂದಾಗಿದ್ದಾರೆ.
ಸೈಬರ್ ವಂಚಕರು ವಿವಿಧ ಏಜೆನ್ಸಿಗಳ ಹೆಸರಲ್ಲಿ ಜನರಿಗೆ ಲಿಂಕ್ ಕಳಿಸ್ತಿದ್ದಾರೆ. ಅಪ್ಪಿತಪ್ಪಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಕಥೆ ಮುಗೀತು. ಗ್ಯಾಸ್ ಬುಕ್ ಮಾಡಿಕೊಳ್ಳುವಂತೆ ಕಳಿಸಿದ ಲಿಂಕ್ ಮೂಲಕವೇ ಮೊಬೈಲ್ ಹ್ಯಾಕ್ ಮಾಡ್ತಿದ್ದಾರೆ. ಗ್ಯಾಸ್ಗಾಗಿ ಅಲೆದಾಡುತ್ತಿರುವವರು ಯಾಮಾರಿ ಲಿಂಕ್ ಒತ್ತಿದ್ರೆ ಗ್ಯಾಸ್ ಸಮಸ್ಯೆಯ ಜೊತೆ ಮತ್ತೊಂದು ಸಮಸ್ಯೆ ಎದುರಾಗೋದು ಫಿಕ್ಸ್ ಎನ್ನುವಂತೆ ಆಗಿದೆ.
ಇಂಥದ್ದೇ ಮೋಸದ ಜಾಲಕ್ಕೆ ಬಿದ್ದಿರುವ ಜನರು ಬೆಂಗಳೂರು ಪೊಲೀಸ್ ಕಂಟ್ರೋಲ್ 112ಗೆ ಕರೆ ಮಾಡಿ ವಂಚನೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರು ಕೂಡ ಎಚ್ಚೆತ್ತಿದ್ದು, ಜನರಿಗೆ ಸೈಬರ್ ವಂಚಕರ ಬಗ್ಗೆ ಜಾಗೃತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಗ್ಯಾಸ್ ಎಜೆನ್ಸಿಗಳ ಹೆಸರುಗಳಲ್ಲಿ ಲಿಂಕ್ಗಳನ್ನ ಬಂದರೆ ಗ್ಯಾಸ್ ಬುಕ್ ಮಾಡಿಕೊಳ್ಳಲು ಹೋಗಬೇಡಿ. ಗ್ಯಾಸ್ಗಳನ್ನ ಅಧಿಕೃತ ಎಜೆನ್ಸಿಗಳಿಗೆ ಹೋಗಿ ಬುಕ್ ಮಾಡಿಕೊಳ್ಳಿ. ಸೈಬರ್ ವಂಚಕರ ಬಲೆಗೆ ಒಳಗಾಗಬೇಡಿ ಎಂದು ಪೊಲೀಸರು ತಿಳಿಹೇಳುವ ಕೆಲಸ ಮಾಡುತ್ತಿದ್ದಾರೆ.















