ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲಿಂಡರ್ ಕೊರತೆ ಹಿನ್ನೆಲೆ ಬಯೋಗ್ಯಾಸ್ ಉತ್ಪಾದನೆಗೆ ಜಿಬಿಎ ಮುಂದಾಗಿದೆ. ಬಯೋಗ್ಯಾಸ್ ಉತ್ಪಾದನೆಯಿಂದ ಹೋಟೆಲ್ ಸೇರಿದಂತೆ ವಾಣಿಜ್ಯ ಉಪಯೋಗಕ್ಕೆ ಗ್ಯಾಸ್ ನೀಡಬಹುದು. ಕೋರಮಂಗಲದ ಬಯೋಗ್ಯಾಸ್ ಸೆಂಟರ್ನಿಂದ ಹೋಟೆಲ್ಗಳಿಗೆ ಗ್ಯಾಸ್ ನೀಡಲಾಗುತ್ತಿದೆ. ಹೀಗಾಗಿ ಕೋರಮಂಗಲದ ಬಯೋಗ್ಯಾಸ್ ಸೆಂಟರ್ಗೆ ಜಿಬಿಎ ಮುಖ್ಯ ಆಯುಕ್ತರು ಭೇಟಿ ನೀಡಿ ಅಧಿಕಾರಿಗಳ ಜೊತೆ ಬಯೋಗ್ಯಾಸ್ ಸೆಂಟರ್ ಹಾಗೂ ಹೋಟೆಲ್ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಇದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಲಯಗಳಲ್ಲಿ ಬಯೋಗ್ಯಾಸ್ ಸೆಂಟರ್ ಮಾಡುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಇತರ ಗ್ಯಾಸ್ ಸಮಸ್ಯೆ ಆದಾಗ ಬಯೋಗ್ಯಾಸ್ ಬಳಸಬಹುದಾಗಿದೆ. ಹಸಿ ಘನತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ. ಈ ಹಿಂದೆ ಬಿಬಿಎಂಪಿ ವತಿಯಿಂದ 12 ಬಯೋಗ್ಯಾಸ್ ಘಟಕಗಳನ್ನು ನಿರ್ಮಾಣ ಮಾಡಲಾಗಿತ್ತು.
ಅವುಗಳಲ್ಲಿ 6 ಘಟಕಗಳು (ವಾರ್ಡ್ ನಂ: 94, 167, 168, 151, 35, 112) ಕಾರ್ಯ ನಡೆಸುತ್ತಿದೆ. ಪ್ರತಿ ಘಟಕದಲ್ಲಿ ದಿನಕ್ಕೆ 5 ಟನ್ ಸಾಮರ್ಥ್ಯದಲ್ಲಿ ಒಟ್ಟು 30 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಇದಲ್ಲದೇ ಉಳಿದ 6 ಘಟಕಗಳಲ್ಲಿ (ವಾರ್ಡ್ ನಂ: 190, 192, 149, 139, 198, 11) ನವೀಕರಣ ಕಾಮಗಾರಿ ಮಾಡಲಾಗುತ್ತಿದೆ. ಬಯೋಗ್ಯಾಸ್ ಘಟಕಗಳಿಂದ ಪ್ರತಿ ಟನ್ ಹಸಿ ತ್ಯಾಜ್ಯದಿಂದ ಸುಮಾರು 30-50 ಕೆ.ಜಿ ಬಯೋಗ್ಯಾಸ್ ಉತ್ಪಾದಿಸುವ ಸಾಮರ್ಥ್ಯವಿದೆ.
ಅದರಂತೆ ಪ್ರತಿ ಘಟಕದಲ್ಲಿ 5 ಟನ್ ತ್ಯಾಜ್ಯದಿಂದ ಸುಮಾರು 200 ಕೆ.ಜಿ ಗ್ಯಾಸ್ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯಾಗುವ ಬಯೋಗ್ಯಾಸ್ ಹೋಟೆಲ್ ಸೇರಿದಂತೆ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ. ಇದರಿಂದ ಒಟ್ಟು 8,400 ರೂ. ಆದಾಯ ದೊರೆಯುತ್ತಿದೆ. ಇದರಿಂದ ಹಸಿ ತ್ಯಾಜ್ಯದಿಂದ ಉತ್ಪಾದನೆಯಾಗುವ ಜೈವಿಕ ಅನಿಲವನ್ನು ಅಡುಗೆ ಇಂಧನವಾಗಿ ಬಳಸಲಾಗುತ್ತಿದೆ.















