ದಾವಣಗೆರೆ : ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀನಿವಾಸ್ ದಾಸ ಕರಿಯಪ್ಪ ಅವರಿಂದು ಐದು ಜನ ಆಕಾಂಕ್ಷಿಗಳ ಜೊತೆಗೆ ಬಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಂಕೇತಿಕವಾಗಿ ಐದು ಜನ ಆಕಾಂಕ್ಷಿಗಳು ಒಟ್ಟಾಗಿ ಬಂದು ನಾಮಪತ್ರ ಸಲ್ಲಿಸಿದ್ದೇವೆ ಎಂದರು.
ನಮ್ಮ ಮುಖಂಡರೊಂದಿಗೆ ಮಾತಾಡಿ, ಮತ್ತೊಂದು ಬಾರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇವೆ. ರಾಜ್ಯ, ರಾಷ್ಟ್ರ ನಾಯಕರು, ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ದಾವಣಗೆರೆ ದಕ್ಷಿಣದಲ್ಲಿ ಮತದಾರರು ಸ್ವಯಂ ಪ್ರೆರೇಪಿತರಾಗಿ ತಯಾರಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ.
ಇದೇ ವೇಳೆ ಎಸ್ ಎಸ್ ಮಲ್ಲಿಕಾರ್ಜುನ್ ನಗುತ್ತಾ ಚುನಾವಣೆ ಮಾಡೋಣ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ನಮ್ಮ ಎದುರಾಳಿ. ನಮ್ಮ ಗೆಲುವಿಗೆ ಏನು ತಂತ್ರಗಾರಿಕೆ ಬೇಕೋ ನಾವು ಮಾಡುತ್ತೇವೆ. ನಾವು ಗೆದ್ದೇ ಗೆಲ್ಲುತ್ತೇವೆ. ಈ ಚುನಾವಣೆ ಒಂದು ರೀತಿಯ ಮಹಾಭಾರತ ಯುದ್ಧ ಇದ್ದಂತೆ. ನಾವು ಐದು ಜನ ಪಾಂಡವರು ಸೇರಿ ಕೌರವರ ಜೊತೆ ಯುದ್ಧ ಮಾಡಿ ಗೆಲ್ಲುತ್ತೇವೆ. ಅಹಿಂದ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸಮರ್ಥ್ ಶಾಮನೂರು ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈನಲ್ ಮಾಡೋದು ಒಂದು ತಲೆನೋವಾಗಿ ಪರಿಣಮಿಸಿದೆ. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಅಲ್ಪಸಂಖ್ಯಾತರು ಹಾಗೂ ಕೆಲ ಅಹಿಂದ ನಾಯಕರ ಪಟ್ಟು ಹಿಡಿದ್ದಾರೆ. ಆದರೆ ಇದರ ಮಧ್ಯೆ ಎಸ್‌ಎಸ್ ಮಲ್ಲಿಕಾರ್ಜುನ್ ತನ್ನ ಪುತ್ರ ಸಮರ್ಥ್ ಶಾಮನೂರುಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ.















