ಮನೆ ಸುದ್ದಿ ಜಾಲ ತಮಿಳುನಾಡಿನಲ್ಲಿ ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ..?

ತಮಿಳುನಾಡಿನಲ್ಲಿ ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ..?

0

ನವದೆಹಲಿ : ತಮಿಳುನಾಡಿನಲ್ಲಿ ವಿಜಯ್‌ ಅವರ ತಮಿಳಿಗ ವೆಟ್ರಿ ಕಳಗಂ ಪಕ್ಷಕ್ಕೆ ಕಾಂಗ್ರೆಸ್‌ ಬೆಂಬಲ ನೀಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಸಂಜೆ 5 ಗಂಟೆಯ ಟ್ರೆಂಡ್‌ ಪ್ರಕಾರ ಟಿವಿಕೆ 108, ಡಿಎಂಕೆ 72, ಎಐಎಡಿಎಂಕೆ 53 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಒಟ್ಟು 234 ಸ್ಥಾನಗಳ ಪೈಕಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಟಿವಿಕೆಗೆ ಯಾರು ಬೆಂಬಲ ನೀಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಕಾಂಗ್ರೆಸ್ ಪಕ್ಷದ ತಮಿಳುನಾಡು ಉಸ್ತುವಾರಿಗಳು ಈಗಾಗಲೇ ಹೈಕಮಾಂಡ್‌ಗೆ ವರದಿಯನ್ನು ಕಳುಹಿಸಿದ್ದು, ವಿಜಯ್ ಅವರ ಟಿವಿಕೆ ಜೊತೆ ಕೈಜೋಡಿಸುವ ಆಯ್ಕೆಯನ್ನು ಮುಕ್ತವಾಗಿರಿಸಿದ್ದಾರೆ ಎಂದು ವರದಿಯಾಗಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಫಲಿತಾಂಶದ ಟ್ರೆಂಡ್‌ಗಳು ಟಿವಿಕೆ ಪರವಾಗಿ ಇರುವುದರಿಂದ ಡಿಎಂಕೆ ಮೈತ್ರಿಯಿಂದ ಹೊರಬಂದು ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಪಕ್ಷದ ಒಳಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.

ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಅವರು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಈಗಾಗಲೇ ಇಂಡಿಯಾ ಒಕ್ಕೂಟದಲ್ಲಿ ಡಿಎಂಕೆ ಸದಸ್ಯ ಪಕ್ಷವಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಈಗ ಕಾಂಗ್ರೆಸ್‌ ಡಿಎಂಕೆ ಸರ್ಕಾರವನ್ನು ಕೆಳಗೆ ಇಳಿಸಿರುವ ಟಿವಿಕೆ ಜೊತೆ ಮೈತ್ರಿ ಮಾಡುತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.