ಧಾರವಾಡ : ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ, ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಲ್ಲಿ ಏಕಾಏಕಿ ಗ್ಯಾಸ್ ಸೋರಿಕೆಯಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಕ್ರಾಸ್ ಬಳಿ ನಡೆದಿದೆ.
ಬೃಹತ್ ವಾಹನದಲ್ಲಿ 18 ಟನ್ ಹೆಚ್‌ಪಿ ಗ್ಯಾಸ್ ಧಾರವಾಡಕ್ಕೆ ತರಲಾಗುತಿತ್ತು. ಈ ವೇಳೆ ಕಲಘಟಗಿ ಸಮೀಪದಲ್ಲಿ ಗ್ಯಾಸ್ ಸೋರಿಕೆ ಆಗುತ್ತಿರುವುದು ಕಂಡುಬಂದಿದೆ. ಹೀಗಾಗಿ ವಾಹನವನ್ನು ನಿಲ್ಲಿಸಿದ ಚಾಲಕ ಸಂಬಂಧಪಟ್ಟ ಕಂಪನಿಗೆ ವಿಷಯ ತಿಳಿಸಿದ್ದಾನೆ.
ಮತ್ತೊಂದು ಕಡೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಮೊದಲಿಗೆ ಕಲಘಟಗಿ, ಯಲ್ಲಾಪುರ ಮಾರ್ಗದಲ್ಲಿ ಸಂಚಾರ ನಿಷೇಧ ಮಾಡಿದ್ದಾರೆ. ಎರಡು ಕಿಲೊಮೀಟರ್ ಅಂತರದಲ್ಲಿ ಜನರ ಸಂಚಾರಕ್ಕೂ ಸಹ ನಿಷೇಧ ಹೇರಲಾಗಿದೆ.
ಈ ಸ್ಥಳಕ್ಕೆ ಮತ್ತೊಂದು ಟ್ಯಾಂಕರ್ ತಂದು ಅದರಲ್ಲಿ ಉಳಿದ ಗ್ಯಾಸ್ ವರ್ಗಾವಣೆ ಮಾಡಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಅತ್ಯಂತ ಸೂಕ್ಷ್ಮವಾಗಿ ತಜ್ಞರ ನೇತೃತ್ವದಲ್ಲಿ ಗ್ಯಾಸ್ ತುಂಬಿಸುವ ಕಾರ್ಯ ನಡೆಯುತ್ತಿದೆ. ಅಗ್ನಿ ಶಾಮಕದಳ, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.















