ಮೈಸೂರು : ಮೈಸೂರು – ಬೆಂಗಳೂರು ಹೈವೆ ರಸ್ತೆಯನ್ನು ಅಗತ್ಯ ಮೂಲ ಸೌಲಭ್ಯದೊಂದಿಗೆ ಮತ್ತಷ್ಟು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಅಲ್ಲದೆ, ಮೈಸೂರು ಪ್ರವೇಶ ದ್ವಾರವಾದ ಮಣಿಪಾಲ್ ಜಂಕ್ಷನ್ ಸಿಗ್ನಲ್ ಬಳಿ ಉಂಟಾಗುತ್ತಿದ್ದ ‘ಟ್ರಾಫಿಕ್ ಜಾಮ್’ ಕರಗಿಸಲು ಫೋರ್ ಲೈನ್ ‘ಫ್ಲೈಓವರ್’ ನಿರ್ಮಾಣ ಕಾಮಗಾರಿಗೂ ಅಸ್ತು ಎಂದಿದೆ.
ರಾಜಧಾನಿ ಬೆಂಗಳೂರು ನಂತರ ಸಾಂಸ್ಕೃತಿಕ ನಗರಿ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಕಚೇರಿ, ವಿದ್ಯಾಭ್ಯಾಸ ವೈಯಕ್ತಿಕ ಕೆಲಸ ಹಾಗೂ ಜೀವನೋಪಾಯಕ್ಕಾಗಿ ಲಕ್ಷಾಂತರ ಮಂದಿ ಉಭಯ ನಗರಗಳ ನಡುವೆ ಸಂಚರಿಸುತ್ತಿದ್ದಾರೆ.
ಈ ಮೊದಲು ಉಭಯ ನಗರಗಳಿಗೆ ಹೋಗಲು ಕನಿಷ್ಠ ಮೂರರಿಂದ ನಾಲ್ಕು ಗಂಟೆ ಹಿಡಿಯುತ್ತಿತ್ತು. ಈ ಸಂಚಾರ ಪ್ರಯಾಸ ತಪ್ಪಿಸಲು ಹೈವೆ ರಸ್ತೆ ನಿರ್ಮಾಣ ಮಾಡಲಾಯಿತು. ಇದರಿಂದ ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆಯೇನೋ ಆಯಿತು. ಆದರೆ, ಬೆಂಗಳೂರಿನಿಂದ ಕಡಿಮೆ ಅವಧಿಯಲ್ಲಿ ಬರುವ ವಾಹನಗಳು ಮೈಸೂರಿನ ಪ್ರವೇಶ ದ್ವಾರ ಸಿದ್ದಲಿಂಗಪುರ ಬಳಿ ಟ್ರಾಫಿಕ್ ಜಾಮ್ಗೆ ಸಿಲುಕುತ್ತಿದ್ದವು.

ಅಲ್ಲಿಂದ ಮಣಿಪಾಲ್ ಆಸ್ಪತ್ರೆ ದಾಟುವವರೆಗೂ ಪ್ರಯಾಣಿಕರ ಪಾಡು ಹೇಳತೀರದು. ಹೀಗಾಗಿ ಈ ಬಾಟಲ್ ನೆಕ್ ಸಮಸ್ಯೆಗೆ ಪರಿಹಾರ ಸಿಗುವ ನಿಟ್ಟಿನಲ್ಲಿಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಯತ್ನದ ಫಲವಾಗಿ ಮಣಿಪಾಲ್ ಆಸ್ಪತ್ರೆ ಬಳಿ ಫ್ಲೈಓವರ್ ನಿರ್ಮಾಣವಾಗುತ್ತಿದೆ. ಇದರೊಂದಿಗೆ ರೈಲ್ವೆ ಸೇತುವೆ, ಟೋಲ್ಗಳ ನಿರ್ಮಾಣ ಸೇರಿದಂತೆ 720 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಮೈಸೂರಿನ ಕೆಂಪೇಗೌಡ ವೃತ್ತದಲ್ಲಿ (ಮಣಿಪಾಲ್ ಜಂಕ್ಷನ್) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫ್ಲೈಓವರ್, ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. 20 ಅಡಿ ಅಡಿಪಾಯದಲ್ಲಿಫುಟಿಂಗ್ ಹಾಕಿ ಭಾರೀ ಗಾತ್ರದ ಪಿಲ್ಲರ್ ಮೇಲೆತ್ತಲಾಗುತ್ತಿದೆ. ಪಿಲ್ಲರ್ಗೆ ಟಿಎಂಟಿ ಕಬ್ಬಿಣ ಅಳವಡಿಸಿದ್ದು, ಕಾಂಕ್ರಿಟ್ ಹಾಕುವ ಕೆಲಸವೂ ನಡೆಯುತ್ತಿದೆ. ಎರಡು ವರ್ಷದೊಳಗೆ ಕಾಮಗಾರಿ ಮುಗಿಸುವ ಗಡುವು ವಿಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ಸ್ ಎನ್ನುತ್ತಾರೆ.
720 ಕೋಟಿ ರೂ. ಪ್ಯಾಕೇಜ್ನಲ್ಲಿಬಿಡದಿ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯೂ ನಡೆಯಲಿದೆ. ಇದರಿಂದ ರೈಲುಗಳ ಸುಗಮ ಸಂಚಾರ ಹಾಗೂ ಆ ಭಾಗದ ಹಳ್ಳಿಗಳ ಜನರ ತಡೆರಹಿತ ಓಡಾಟಕ್ಕೆ ಅನುಕೂಲವಾಗಲಿದೆ. ಈ ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ಗಣಂಗೂರು, ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ, ಬೆಂಗಳೂರಿನ ಕಣಮಿಣಕಿಯಲ್ಲಿ ಟೋಲ್ಗಳಿವೆ. 28 ಕಡೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವಿದೆ. ಹೆದ್ದಾರಿಯಲ್ಲಿಸಂಚರಿಸಿದ ಕಿಲೋ ಮೀಟರ್ಗಳಿಗೆ ಮಾತ್ರವೇ ಟೋಲ್ ಕಟ್ಟಬೇಕಾಗುತ್ತದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.















