ಮೈಸೂರು : ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗ ಬಾರದೆಂಬ ಉದ್ದೇಶದಿಂದ, ಪತಿಯ ಸಾವಿನ ನೋವಿನ ನಡುವೆಯೂ ಪ್ರಭಾರ ಮುಖ್ಯಶಿಕ್ಷಕಿ ಶಾಲೆಗೆ ಹಾಜರಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗಣಿತ ವಿಷಯದ ಪೂರ್ವ ಸಿದ್ಧತೆಯಲ್ಲಿ ತೊಡಗಿದ ಹೃದಯಸ್ಪರ್ಶಿ ಘಟನೆ ಎಚ್‌ಡಿ ಕೋಟೆ ತಾಲೂಕಿನ ಜಿ.ಬಿ.ಸರಗೂರು ಗ್ರಾಮದಲ್ಲಿ ನಡೆದಿರುವ ಘಟನೆ ನಿಧಾನವಾಗಿ ಬೆಳಕಿಗೆ ಬಂದಿದೆ.
ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಜ್ಯೋತಿ ಅವರ ಈ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಮೈಸೂರು ನಗರದ ದಟ್ಟಗಳ್ಳಿ ನಿವಾಸಿಯಾದ ಜ್ಯೋತಿ ಅವರ ಪತಿ ಕಿರಣ್ ಕುಮಾರ್ (47), ಸಾಫ್ಟವೇರ್ ಎಂಜಿನಿಯರ್ ಆಗಿದ್ದು, ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಸಂಜೆ ಅವರ ಅಂತ್ಯಸಂಸ್ಕಾರ ನೆರವೇರಿತು.
ಮಾ. 28ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣದಿಂದ ಹಾಗೂ ತಾವೇ ಗಣಿತ ಶಿಕ್ಷಕಿಯಾಗಿರುವ ಹಿನ್ನೆಲೆಯಲ್ಲಿ, ಜ್ಯೋತಿ ಅವರು ಗುರುವಾರ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ನಡೆಸಿ, ಮಾರ್ಗದರ್ಶನ ನೀಡಿದರು. ಈ ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಶಾಲೆಗೆ ಭೇಟಿ ನೀಡಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದರು. ನಿನ್ನೆಯಷ್ಟೇ ನಿಮ್ಮ ಪತಿ ಅಗಲಿದ್ದಾರೆ. ನೀವು ದುಃಖದಲ್ಲಿದ್ದೀರಿ. ನಿಮ್ಮ ಬದಲಿಗೆ ಬೇರೆ ಶಿಕ್ಷಕರನ್ನು ಎರಡು ದಿನಗಳ ಮಟ್ಟಿಗೆ ನಿಯೋಜಿಸುತ್ತೇವೆ. ನೀವು ಮನೆಗೆ ತೆರಳಬಹುದು ಎಂದು ಸಲಹೆ ನೀಡಿದರು.
ಅಧಿಕಾರಿಗಳಿಂದ ಬಂದ ರಜೆ ಸಲಹೆಯನ್ನು ನಯವಾಗಿ ತಿರಸ್ಕರಿಸಿದ ಶಿಕ್ಷಕಿ ಜ್ಯೋತಿ, “ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗಣಿತವನ್ನು ಸಂಪೂರ್ಣವಾಗಿ ನಾನೇ ಬೋಧಿಸಿದ್ದೇನೆ. ಶಾಲೆಯಲ್ಲಿ 59 ವಿದ್ಯಾರ್ಥಿಗಳಿದ್ದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗಣಿತ ಸ್ವಲ್ಪ ಕಠಿಣವಾಗಿರುತ್ತದೆ. ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕು ಎಂಬ ಉದ್ದೇಶದಿಂದ ಶಾಲೆಗೆ ಬಂದಿದ್ದೇನೆ. ನಾಳೆಯೂ ಬಂದು ಮಕ್ಕಳೊಂದಿಗೆ ಇರುತ್ತೇನೆ. ಶನಿವಾರದಿಂದ ರಜೆ ಪಡೆಯುತ್ತೇನೆ ” ಎಂದು ಹೇಳಿದರು.
ಪೋಷಕರು, ಸಾರ್ವಜನಿಕರು ಮೆಚ್ಚುಗೆ – ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ತೋರಿದ ಜ್ಯೋತಿ ಅವರ ಅಪಾರ ಕಾಳಜಿಗೆ ಪೋಷಕರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.















