ನವದೆಹಲಿ : ಏಪ್ರಿಲ್ 1ರಿಂದ ಚೀನಾದ ಸಿಸಿಟಿವಿ ಬ್ರ್ಯಾಂಡ್ಗಳನ್ನು ದೇಶದಲ್ಲಿ ನಿಷೇಧಿಸಲು ಚಿಂತಿಸಲಾಗಿದೆ. ಚೀನಾದ ಸಿಸಿಟಿವಿ ದೈತ್ಯ ಕಂಪನಿಗಳಾದ ಹೈಕ್ವಿಷನ್ ಮತ್ತು ದಹುವಾವನ್ನು ದೇಶದಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಕ್ಯಾಮೆರಾಗಳು ಮತ್ತು ಸಂಬಂಧಿತ ಹಾರ್ಡ್ವೇರ್ ನಿಷೇಧಿಸಲು ಭಾರತ ಸರ್ಕಾರ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣೀಕರಣ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣೀಕರಣ ಚೌಕಟ್ಟಿನ ಅಡಿಯಲ್ಲಿ ಹೊಸ ಪ್ರಮಾಣೀಕರಣ ಅಗತ್ಯಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿವೆ. ಇದರಿಂದ ಭಾರತದಲ್ಲಿ ಮಾರಾಟವಾಗುವ ಯಾವುದೇ ಸಿಸಿಟಿವಿ ಉತ್ಪನ್ನಕ್ಕೆ STQC ಅನುಮೋದನೆ ಕಡ್ಡಾಯವಾಗಲಿದೆ. ಒಂದು ವರದಿಯ ಪ್ರಕಾರ, ಚೀನಾದ ಕಂಪನಿಗಳು ಮತ್ತು ಚೀನಾದ ಮೂಲ ಚಿಪ್ಸೆಟ್ಗಳನ್ನು ಬಳಸುವ ಯಾವುದೇ ಸಾಧನಗಳಿಗೆ ಈ ಪ್ರಮಾಣೀಕರಣ ನೀಡಲು ಅಧಿಕಾರಿಗಳು ನಿರಾಕರಿಸಲಿದ್ದಾರೆ ಎನ್ನಲಾಗಿದೆ.
ಯಾವುದೇ ಅನುಮತಿ ಇಲ್ಲ ಎಂದರೆ ಮಾರುಕಟ್ಟೆ ಪ್ರವೇಶವಿಲ್ಲ. ಇದು ವಾಸ್ತವವಾಗಿ ನಿಷೇಧ ಹೇರಿದಂತೆ ಎಂದು ವರದಿ ತಿಳಿಸಿದೆ. ಈ ಕ್ರಮವು ಭಾರತದ ಸರ್ಕಾರದ ಇಂಟರ್ನೆಟ್-ಕನೆಕ್ಟೆಡ್ ಉಪಕರಣಗಳ ಭದ್ರತಾ ಮಾನದಂಡಗಳನ್ನು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಭಾಗ ಎಂದು ಪರಿಗಣಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ ತಯಾರಕರು ಪ್ರಮುಖ ಘಟಕಗಳ ಮೂಲ ದೇಶವನ್ನು, ವಿಶೇಷವಾಗಿ ಸಿಸ್ಟಮ್-ಆನ್-ಚಿಪ್ ಅನ್ನು ಬಹಿರಂಗಪಡಿಸಬೇಕು ಮತ್ತು ಸುರಕ್ಷತೆ ಪರೀಕ್ಷೆಗಾಗಿ ಮಾದರಿ ಸಲ್ಲಿಸಬೇಕು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2024ರ ಏಪ್ರಿಲ್ನಲ್ಲಿ ಪರಿಚಯಿಸಿದ ಎಸೆನ್ಶಿಯಲ್ ರಿಕ್ವಾರ್ಮೆಂಟ್ಸ್ ನಾರ್ಮ್ಸ್ ಅಡಿಯಲ್ಲಿ ಕಂಪನಿಗಳಿಗೆ ಎರಡು ವರ್ಷದ ಟಾರ್ಗೆಟ್ ಸಮಯ ನೀಡಿ ಆಗಿತ್ತು. ಈಗ ಆ ಕಾಲಾವಧಿ ಮುಗಿಯುತ್ತಿದೆ.
ಚೀನಾದ ಬ್ರ್ಯಾಂಡ್ಗಳು ಇತ್ತೀಚಿನವರೆಗೆ ಭಾರತದ ಸಿಸಿಟಿವಿ ಮಾರುಕಟ್ಟೆಯಲ್ಲಿ ಪ್ರಾಬಲು ಮೆರೆದಿವೆ. ಕಳೆದ ವರ್ಷವರೆಗೆ ಒಟ್ಟು ಮಾರಾಟದ ಸುಮಾರು ಮೂರನೇ ಒಂದು ಭಾಗವನ್ನು ಚೀನಾದ ಕಂಪನಿಗಳು ಹೊಂದಿವೆ. ಆದರೆ ಆ ಪ್ರಾಬಲ್ಯವು ಇದೀಗ ಇಲ್ಲವಾಗುತ್ತಿದೆ. ಸಿಪಿ ಪ್ಲಸ್, ಕ್ಯುಬೊ, ಪ್ರಮಾ, ಮ್ಯಾಟ್ರಿಕ್ಸ್ ಮತ್ತು ಸ್ಪಾರ್ಷ್ ಸೇರಿದಂತೆ ಭಾರತೀಯ ತಯಾರಕ ಕಂಪೆನಿಗಳು ಪೈಪೋಟಿ ನೀಡುತ್ತಿವೆ. ತೈವಾನೀಸ್ ಚಿಪ್ಸೆಟ್ಗಳ ಸುತ್ತ ತಮ್ಮ ಪೂರೈಕೆ ಜಾಲವನ್ಪುನು ಬಲಪಡಿಸುತ್ತಿವೆ. ಫರ್ಮ್ವೇರ್ಗಳನ್ನು ಸ್ಥಳೀಯಗೊಳಿಸಲಾಗಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಫೆಬ್ರವರಿ ವೇಳೆಗೆ ಭಾರತೀಯರು ಈಗ ಮಾರುಕಟ್ಟೆಯ ಶೇ. 80ರಷ್ಟು ನಿಯಂತ್ರಣ ಹೊಂದಿದ್ದಾರೆ. ಪ್ರೀಮಿಯಂ ವಿಭಾಗವು ಹೆಚ್ಚಾಗಿ ಬಾಷ್ ಮತ್ತು ಹನಿವೆಲ್ನಂತಹ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆಯಾದರೂ ಸಾಮೂಹಿಕ ಮಾರುಕಟ್ಟೆ ಸ್ಪಷ್ಟವಾಗಿ ಬದಲಾಗಿದೆ. ಹೊಸ ನಿಯಮದ ಪ್ರಕಾರ 500ಕ್ಕೂ ಹೆಚ್ಚು ಸಿಸಿಟಿವಿ ಮಾದರಿಗಳು ಈಗಾಗಲೇ ಅನುಮತಿ ಪಡೆದಿವೆ. ಮೊದಲೇ ತಯಾರಿ ನಡೆಸಿದ ಕಂಪನಿಗಳು ಉತ್ತಮ ಸ್ಥಿತಿಯಲ್ಲಿವೆ. ಚೀನಿ ಘಟಕಗಳನ್ನು ಅವಲಂಬಿಸಿರುವ ಕಂಪನಿಗಳನ್ನು ಏಪ್ರಿಲ್ 1ರಿಂದ ಲಾಕ್ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.















