ಮನೆ ರಾಜ್ಯ ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

0

ಬೆಂಗಳೂರು : ಅತ್ತ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವಿನ ಸಂಘರ್ಷ ನಿಲ್ಲುತ್ತಿಲ್ಲ. ಇತ್ತ ರಾಜ್ಯದಲ್ಲಿ ಬಡ ಆಟೋ ಚಾಲಕರಿಗೆ ಎದುರಾಗಿರುವ ಎಲ್‌ಪಿಜಿ ಅಭಾವ ನೀಗುತ್ತಿಲ್ಲ. ಈ ಮಧ್ಯೆ ಜನಪ್ರತಿನಿಧಿಗಳು ಚಾಲಕರಿಗೆ ದನಿ ಆಗಿ ನಿಲ್ಲುತ್ತಿಲ್ಲ. ಬಂಕ್‌ಗಳ ಎದುರು ಕಿಲೋ ಮೀಟರ್ ಉದ್ದಕ್ಕೆ ಕ್ಯೂ ನಿಂತು ಬೇಸತ್ತ ಆಟೋ ಚಾಲಕರು ಇವತ್ತು ಬೆಳ್ಳಂಬೆಳಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ್ರು. ಸಚಿವರ ಮನೆ ಮುಂಭಾಗಕ್ಕೆ ಆಟೋಗಳನ್ನು ತಂದು ನಿಲ್ಲಿಸಿದ ಚಾಲಕರು ಆಕ್ರೋಶ ಹೊರಹಾಕಿದ್ರು.

ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಿದ ಆಟೋ ಚಾಲಕರು, ಗ್ಯಾಸ್ ಅಭಾವಕ್ಕೆ ಪರಿಹಾರ ಕೊಡುವಂತೆ ಆಗ್ರಹಿಸಿದ್ರು. ಬೆಂಗಳೂರಿನಲ್ಲಿ ಎಲ್ಲೂ ಎಲ್‌ಪಿಜಿ ಗ್ಯಾಸ್ ಸಿಗುತ್ತಿಲ್ಲ. ಇದರಿಂದ ಹಗಲು ರಾತ್ರಿ ಎನ್ನದೇ ಬಂಕ್‌ಗಳ ಎದುರು ಕ್ಯೂ ನಿಲ್ಲಬೇಕಾದ ಸ್ಥಿತಿ ಬಂದಿದೆ. ಆದರೂ ಗ್ಯಾಸ್ ಸಿಗುತ್ತಿಲ್ಲ. ಅಲ್ಲದೇ ಕೆಲ ಬಂಕ್‌ಗಳು ಮನಬಂದಂತೆ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಪ್ರತಿ ಲೀಟರ್‌ಗೆ 90 ರೂಪಾಯಿಯಿಂದ 135 ರೂಪಾಯಿ ನಿಗದಿ ಮಾಡಿದ್ದಾರೆ. ಇದರಿಂದ ಚಾಲಕರ ಬದುಕು ದುಸ್ತರವಾಗಿದೆ. ಬಂಕ್‌ಗಳಲ್ಲಿ ಸಮರ್ಪಕ ಗ್ಯಾಸ್ ಪೂರೈಕೆ ಮತ್ತು ಬಂಕ್ ದರಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ರು.

ಆಟೋ ಚಾಲಕರ ಆಕ್ರೋಶದ ಮನವಿಯನ್ನ ಸ್ವೀಕರಿಸಿದ ಸಚಿವ ಮುನಿಯಪ್ಪ. ಸರ್ಕಾರ ಯಾವುದೇ ದರ ಏರಿಕೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ನಿತ್ಯ ಸುಮಾರು 3 ಸಾವಿರ ಸಿಲಿಂಡರ್‌ಗಳನ್ನು ಒದಗಿಸಲಾಗ್ತಿದೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ ಖಾಸಗಿ ಗ್ಯಾಸ್ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ಮಾಡ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು.. ಸಂಬಂಧ ಪಟ್ಟ ಬಂಕ್ ಮಾಲೀಕರನ್ನು ಕರೆದು ಸಭೆ ನಡೆಸೋದಾಗಿ ಹೇಳಿದ್ರು.

ರಾಜ್ಯದಲ್ಲಿ ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸೋ ಬದಲು ಕೆಸರೆರಚಾಟ ಶುರುವಾಗಿದೆ. ಬೆಳಗ್ಗೆಯಷ್ಟೇ ಕೇಂದ್ರ ಸಮರ್ಪಕವಾಗಿ ಇಂಧನ ಪೂರೈಕೆ ಮಾಡುತ್ತಿದ್ದು, ಯಾವುದೇ ವ್ಯತ್ಯಯವಾಗಿಲ್ಲ ಅಂತ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದರು. ಆದ್ರೆ, ಸಂಜೆ ಹೊತ್ತಿಗೆ ಮುನಿಯಪ್ಪ ಉಲ್ಟಾ ಹೊಡೆದಿದ್ದಾರೆ. ಕರ್ನಾಟಕಕ್ಕೆ ಗ್ಯಾಸ್ ಹಂಚಿಕೆಯಲ್ಲಿ ಭಾರೀ ಅನ್ಯಾಯವಾಗಿದ್ದು, ಕೇಂದ್ರ ತಾರತಮ್ಯ ಮಾಡುತ್ತಿದೆ ಅಂತ ಅಂತ ದೂರಿದ್ದಾರೆ.

ಎಲ್‌ಪಿಜಿ ಗ್ಯಾಸ್, ವಾಣಿಜ್ಯ ಸಿಲಿಂಡರ್, ಸಿಎನ್‌ಜಿ, ಪೆಟ್ರೋಲ್ ಹಾಗೂ ಡೀಸೆಲ್ ಎಲ್ಲವೂ ಕೇಂದ್ರದ ನಿಯಂತ್ರಣದಲ್ಲಿದ್ದು, ಕರ್ನಾಟಕಕ್ಕೆ ತಾರತಮ್ಯ ನೀಡಿ ಅನುಸರಿಸುತ್ತಿರೋದ್ರಿಂದ ಸಾರ್ವಜನಿಕರಿಗೆ ಸಂಕಷ್ಟ ಉಂಟಾಗಿದೆ ಅಂತ ಆರೋಪಿಸಿದ್ದಾರೆ. ಬೇರೆ ರಾಜ್ಯಗಳ ತರಹ ಕರ್ನಾಟಕಕ್ಕೂ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಕೇಂದ್ರಕ್ಕೂ ಪತ್ರ ಬರೆದಿದ್ದಾರೆ.

ಸಚಿವ ಮುನಿಯಪ್ಪರೊಂದಿಗೆ ಸಭೆ ಬಳಿಕ ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಬೈ ಎಲೆಕ್ಷನ್ ಮುಗಿಯೋವರೆಗೂ ಇವರಿಗೆ ನಮ್ಮ ಕಷ್ಟ ತಿಳಿಯಲ್ಲ. ಗ್ಯಾಸ್‌ಗಾಗಿ ನಾವು ರಸ್ತೆಯಲ್ಲಿ ಮಲಗಿದ್ದೇವೆ. ಸಚಿವರು ಅಸಡ್ಡೆ ಉತ್ತರ ಕೊಟಿದ್ದಾರೆ. ನಮ್ಮ ಕಷ್ಟ ಕೇಳೋಕೆ ಸರ್ಕಾರಕ್ಕೆ ಟೈಂ ಇಲ್ಲವಾಗಿದೆ. ಎಲೆಕ್ಷನ್ ಆಗೋವರೆಗೂ ಇವರು ಏನೂ ಮಾಡೋಲ್ಲ.. ದರ ಏರಿಕೆಯಾದ್ರೂ ಯಾರೂ ಬಂಕ್ ಅವರನ್ನ ಕೇಳ್ತೀಲ್ಲ.. ಆಟೋ ದರ ಹೆಚ್ಚು ಕೇಳಿದ್ರೇ ನಮ್ಮನ್ನ ವಿಲನ್ ಮಾಡ್ತಾರೆ ಎಂದು ಆಕ್ರೋಶ ಹೊರಹಾಕಿದ್ರು.

ಮಹಿಳಾ ಆಟೋ ಚಾಲಕರು ಸಹ ತಮ್ಮ ಅಳಲು ತೋಡಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ಆಟೋ ಚಾಲಕರಾಗಿದ್ದೇವೆ. ಪುಟ್ಟ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಗ್ಯಾಸ್ ಬಂಕ್ ಅಲ್ಲಿ ಕಾಯುವಂತಾಗಿದೆ. ಗಂಡ ಒಂದು ಬಂಕ್ ಅಲ್ಲಿ ಕಾದ್ರೇ, ಹೆಂಡತಿ ಒಂದು ಬಂಕ್ ಅಲ್ಲಿ ಕಾಯುವಂತಾಗಿದೆ. ದಯವಿಟ್ಟು ನಮಗೆ ಎಲ್‌ಪಿಜಿ ಸಿಗುವಂತೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ರು.

ಆಟೋ ಗ್ಯಾಸ್‌ಗಾಗಿ ಬಳಲಿ ಬೆಂಡಾಗಿರುವ ಚಾಲಕರು ಸಚಿವರಿಗೆ ಮನವಿ ಮಾಡಿದ್ದಾರೆ. ಆದರೆ. ಏಪ್ರಿಲ್ 10ರ ನಂತರ ಸಭೆ ನಡೆಸೋದಾಗಿ ಸಚಿವರು ಭರವಸೆ ನೀಡಿದ್ದಾರೆ. ಅತ್ತ ಗ್ಯಾಸ್ ಸಮಸ್ಯೆಗೆ ಕೇಂದ್ರವೇ ಕಾರಣ ಎನ್ನುತ್ತಿದ್ದಾರೆ. ಈ ಗ್ಯಾಸ್ ಸಮಸ್ಯೆಗೆ ಪರಿಹಾರ ಯಾವಾಗ ಸಿಗುತ್ತೆ ಕಾದುನೋಡಬೇಕಿದೆ.